ವಕ್ಫ್ ವಿವಾದ | ಜನರ ದಿಕ್ಕು ತಪ್ಪಿಸೋ ಅಭಿಯಾನ ಶುರು ಮಾಡಿದ ಕಾಂಗ್ರೆಸ್ : ಪ್ರಹ್ಲಾದ್ ಜೋಶಿ ಆರೋಪ
ಹುಬ್ಬಳ್ಳಿ : ವಕ್ಫ್ ವಿವಾದದಲ್ಲಿ ಕಾಂಗ್ರೆಸ್ ಪಕ್ಷ "ಜನರ ದಿಕ್ಕು ತಪ್ಪಿಸೋ ಅಭಿಯಾನ" ಶುರು ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಯಾವುದೇ ವಿವಾದ, ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವುದು, ತಪ್ಪು ದಾರಿಗೆ ಎಳೆಯುವುದು ಕಾಂಗ್ರೆಸ್ ಸಂಸ್ಕೃತಿ ಆಗಿಬಿಟ್ಟಿದೆʼ ಎಂದು ಹರಿಹಾಯ್ದರು.
ʼಈಗ ವಕ್ಫ್ ವಿಚಾರದಲ್ಲೂ ಕಾಂಗ್ರೆಸ್ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಆದರೆ, ಬಿಜೆಪಿ ಯಾವತ್ತೂ ಸ್ಪಷ್ಟ ನಿಲುವು ತೋರಿದೆ, ವಕ್ಫ್ ಅತಿಕ್ರಮಿಸಲು ಬಿಡುವುದಿಲ್ಲʼ ಎಂದರು.
ಕಾಂಗ್ರೆಸ್ಸಿನ ಪ್ರಭಾವಿ ನಾಯಕರೇ ವಕ್ಫ್ ಆಸ್ತಿ ಹೊಡೆದಿದ್ದಾರೆ: ಅನ್ವರ್ ಮಾನಪ್ಪಾಡಿ ವರದಿ ಪ್ರಕಾರ ಕಾಂಗ್ರೆಸ್ಸಿನ ಅತ್ಯಂತ ಪ್ರಭಾವಿ ನಾಯಕರೇ ವಕ್ಫ್ ನ 29 ಸಾವಿರ ಎಕರೆ ಆಸ್ತಿ ಹೊಡೆದಿದ್ದಾರೆ. ವಿಧಾನ ಪರಿಷತ್ತಿನ ಹಕ್ಕು ಭಾದ್ಯತಾ ಸಮಿತಿ ಸಹ ಮಾನಪ್ಪಾಡಿ ವರದಿ ಪರಿಶೀಲನೆ ಮಾಡಿ ಮತ್ತೊಂದು ವರದಿ ಕೊಟ್ಟಿದೆ. ವಕ್ಫ್ ಆಸ್ತಿ ದುರುಪಯೋಗ ಆಗಿದೆ ಎಂಬ ಅಂಶ ಅದರಲ್ಲಿದೆ ಎಂದು ಜೋಶಿ ತಿಳಿಸಿದರು.