ಕೇಂದ್ರದಲ್ಲಿ ಕರ್ನಾಟಕದ ಪರ ಕೆಲಸ ಮಾಡುವಲ್ಲಿ ಪ್ರಹ್ಲಾದ್ ಜೋಶಿ ವಿಫಲ : ದಿನೇಶ್ ಗುಂಡೂರಾವ್
ಹುಬ್ಬಳ್ಳಿ : ಕೇಂದ್ರದಲ್ಲಿ ಕರ್ನಾಟಕದ ಪರ ಕೆಲಸ ಮಾಡುವಂತಹ ಸಂಸದರು ನಮ್ಮ ರಾಜ್ಯಕ್ಕೆ ಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ರಾಜ್ಯದಿಂದ ಆಯ್ಕೆಯಾಗಿದ್ದ ಬಹುತೇಕ ಬಿಜೆಪಿ ಸಂಸದರು ಕರ್ನಾಟಕವನ್ನ ಮರೆತಿದ್ದಾರೆ. ಅದರಲ್ಲೂ ಪ್ರಹ್ಲಾದ್ ಜೋಶಿಯವರು ಕೇಂದ್ರದಲ್ಲಿ ಸಚಿವರಾದ ಮೇಲೆ ಸಂಪೂರ್ಣವಾಗಿ ಕರ್ನಾಟಕವನ್ನು ಮರೆತಿದ್ದಾರೆ. ರಾಜ್ಯದ ಪರ ಕೇಂದ್ರ ಸರ್ಕಾರದಲ್ಲಿ ಧ್ವನಿ ಎತ್ತಿ ಕರ್ನಾಟಕಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ʼಇವರಿಗೆ ರಾಜಕೀಯ ಅಧಿಕಾರಕ್ಕೆ ಮಾತ್ರ ಕರ್ನಾಟಕ ಬೇಕು. ಗೆದ್ದ ಮೇಲೆ ಕೇಂದ್ರದಲ್ಲಿ ಮನಬಂದಂತೆ ವರ್ತಿಸುವ ಅಹಂನಲ್ಲಿ ಪ್ರಹ್ಲಾದ್ ಜೋಶಿಯವರಿದ್ದಾರೆ. ಕರ್ನಾಟಕಕ್ಕೆ ಜೋಶಿಯವರ ಕೊಡುಗೆ ಏನು. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಒಂದು ಬಾರಿಯಾದರು ಕೇಂದ್ರ ಸರ್ಕಾರದಲ್ಲಿ ಧ್ವನಿ ಎತ್ತಿದ್ದಾರೆಯೇ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಕೇಂದ್ರಕ್ಕೆ ಹೋದಮೇಲೆ ಅಹಂಕಾರದಲ್ಲಿ ಮೇರೆಯುವ ಬಿಜೆಪಿ ಸಂಸದರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಪಾಠ ಕಲಿಸಲು ನಿಶ್ಚಯಿಸಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಸಿಂಗಲ್ ಡಿಜಿಟ್ ದಾಟುವುದಿಲ್ಲ. ಕಾಂಗ್ರೆಸ್ ಗೆ ನಿರೀಕ್ಷೆ ಮೀರಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದು ಸತ್ಯ ಹಾಗೂ ಸುಳ್ಳಿನ ನಡುವಿನ ಹೋರಾಟದ ಚುನಾವಣೆಯಾಗಿದೆ. ಪ್ರಧಾನಿ ಮೋದಿಯವರು ಚುನಾವಣೆಯಲ್ಲಿ ಸುಳ್ಳಿನ ಆಶ್ರಯ ಪಡೆದಿದ್ದಾರೆ. 10 ವರ್ಷದಲ್ಲಿ ತಾವು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಚುನಾವಣೆಯಲ್ಲಿ ಚರ್ಚೆ ಮಾಡಲಿಲ್ಲ. ಬದಲಿಗೆ ಸಮಾಜದಲ್ಲಿ ದ್ವೇಷ ಬಿತ್ತುವಂತಹ, ಸಮಾಜವನ್ನ ಒಡೆಯುವಂತಹ ಮಾತುಗಳನ್ನು ಆಡಿದ್ದಾರೆ. ಜನರಿಗೆ ಇವರ ಮೋಸದ ಮಾತುಗಳ ಅರಿವಾಗಿದೆ. ಬಡವರು, ಮಹಿಳೆಯರು, ಮಧ್ಯಮ ವರ್ಗದ ಪರ ಗ್ಯಾರಂಟಿ ಯೋಜನೆಗಳನ್ನ ನೀಡಿರುವ ಕಾಂಗ್ರೆಸ್ ಗೆ ಜನರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಲಿದೆ ಎಂದರು.
ದೇಶದ ಆರ್ಥಿಕ ಪರಸ್ಥಿತಿ ಬಗ್ಗೆ ಬಿಜೆಪಿ ಮಾತಾಡಬಹದು ಅಂದುಕೊಂಡಿದ್ದೇವು. ಸುಳ್ಳಿನ ಆಧಾರದ ಮೇಲೆ ದೇಶ ವಿಭಜನೆ ಮಾಡುವುದು ಬಿಜೆಪಿ ಪ್ರಚಾರವಾಗಿದೆ. ಬಿಜೆಪಿ ಯಾವಾಗಲೂ ಮೀಸಲಾತಿ ವಿರೋಧಿ ಪಕ್ಷ. ಮಂಡಲ ಆಯೋಗ ರಚನೆಯಾದಾಗ ಅದರ ವಿರುದ್ದ ಇದ್ದವರು ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜನರ ವಿಶ್ವಾಸ ಗಳಿಸಿದ್ದರೆ ಕಾಶ್ಮೀರದಲ್ಲಿ ಏಕೆ ಅಭ್ಯರ್ಥಿಗಳನ್ನು ನಿಲ್ಲಿಸಲಿಲ್ಲ. ಬಿಜೆಪಿಯ ಸುಳ್ಳಿನ ಬಣ್ಣ ಬಯಲಾಗುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಉತ್ತರ ಕರ್ನಾಟಕ ಭಾಗದ ಅನೇಕ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೆವೆ. ಅಹಂಕಾರದಲ್ಲಿ ಪ್ರಹ್ಲಾದ್ ಜೋಶಿ ಇದ್ದರು, ಕರ್ನಾಟಕಕ್ಕೆ ಏನ್ ಮಾಡಿದ್ದೀರಿ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.