ಬಿಜೆಪಿ ಭಯೋತ್ಪಾದಕರ ಪಕ್ಷ ಎಂದ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ

Update: 2024-10-13 05:42 GMT

ಹುಬ್ಬಳ್ಳಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು "ಕಾಂಗ್ರೆಸ್" ಎನ್ನುವ ಬದಲಾಗಿ ಬಾಯ್ತಪ್ಪಿ ಬಿಜೆಪಿ ಭಯೋತ್ಪಾದಕರ ಪಕ್ಷ ಎಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ‌ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಖರ್ಗೆ ಅವರು ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದಿದ್ದಾರೆ. ಆದರೆ, ವಾಸ್ತವವಾಗಿ ಅವರು ತಮ್ಮ ಪಕ್ಷದಲ್ಲಿ ನಡೆಯುತ್ತಿರುವುದನ್ನು ಹೇಳಿರಬೇಕುʼ ಎಂದು ಜೋಶಿ ತಿರುಗೇಟು ನೀಡಿದರು.

ಭಯೋತ್ಪಾದಕರನ್ನು ಬೆಳೆಸಿದ್ದೇ ಕಾಂಗ್ರೆಸ್:

ʼಅಫ್ಜಲ್ ಗುರು ವಿಚಾರವಾಗಿ ಮೃದು ಧೋರಣೆ ತೋರಿದ್ದೂ ಕಾಂಗ್ರೆಸ್ ಎಂದ ಜೋಶಿ, ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಇರಿಸಿಕೊಂಡು ಎಂಥೆಂಥ ಭಯೋತ್ಪಾದಕರನ್ನು ಬೆಳೆಸಿದ್ದೀರಿ ಎಂಬುದು ಇಡೀ ದೇಶಕ್ಕೇ ಗೊತ್ತಿದೆ. 2004ರಲ್ಲಿ ಭಯೋತ್ಪಾದನಾ ತಡೆ ಕಾಯಿದೆ(POTA) ರದ್ದುಗೊಳಿಸಿದ್ದು ಕಾಂಗ್ರೆಸ್, ಪ್ರಧಾನಿ ಮನಮೋಹನ್ ಸಿಂಗ್ ಪ್ರತ್ಯೇಕತಾವಾದಿ ಉಗ್ರಗಾಮಿಗಳೊಂದಿಗೆ ಕೈಕುಲುಕಿದ್ದು ಇದೆಲ್ಲವನ್ನೂ ಬಹುಶಃ ಖರ್ಗೆ ಅವರು ಮರೆತಿರಬೇಕು ಎಂದರು.

ಭಯೋತ್ಪಾದನೆ ನಿಗ್ರಹಿಸಿದ್ದೇ ಬಿಜೆಪಿ ಸರ್ಕಾರ:

ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನೀಗ್ರಹಿಸಿದ್ದೇ ಬಿಜೆಪಿ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಕಾಂಗ್ರೆಸ್ ಆಡಳಿತದಲ್ಲಿ ಕಾಶ್ಮೀರಿ ಯುವಕರ ಕೈಯಲ್ಲಿ ಕಲ್ಲುಗಳಿದ್ದವು. ಆದರೆ ಇಂದು ಅವರಿಗೆ ಉದ್ಯೋಗವಿದೆ. ಒಬ್ಬ ಹಿರಿಯ ನಾಯಕರಾಗಿ ಖರ್ಗೆಯವರಿಗೆ ತಾವೇನು ಹೇಳುತ್ತಿರುವೆ ಎಂಬುದರ ಮೇಲೆ ನಿಗಾ ಇರಬೇಕು ಎಂದು ತಿರುಗೇಟು ನೀಡಿದರು.

ದಲಿತರಿಗೆ ನಿಜವಾಗಿ ಗೌರವ ಕೊಟ್ಟಿದ್ದೇ ಬಿಜೆಪಿ:

ದೇಶದಲ್ಲಿ ದಲಿತರಿಗೆ ನಿಜವಾಗಿ ಗೌರವ ಕೊಟ್ಟಿದ್ದೇ ಬಿಜೆಪಿ. ಕಾಂಗ್ರೆಸ್ ಯಾವತ್ತೂ ದಲಿತ ವಿರೋಧಿಯಾಗೇ ವರ್ತಿಸುತ್ತಿದೆ. ಹಾಗಾಗಿಯೇ ಕಾಂಗ್ರೆಸ್ ಪಕ್ಷ ಇಂಥ ಸ್ಥಿತಿಗೆ ಬಂದಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News