ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಎತ್ತಿ ಕಟ್ಟಿದ್ದಾರೆ : ದಿಂಗಾಲೇಶ್ವರ ಸ್ವಾಮೀಜಿ

Update: 2024-04-05 16:12 GMT

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಎತ್ತಿ ಕಟ್ಟಿದ್ದಾರೆ. ಇದು ಲಿಂಗಾಯತರನ್ನು ಒಡೆದು ಆಳುವ ನೀತಿಯಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ಲಿಂಗಾಯತ ಮುಖಂಡರನ್ನು ಆಕರ್ಷಣೆ ಮಾಡಿ ನಮ್ಮ ವಿರುದ್ಧ ಮಾತಾಡುವಂತೆ ಮಾಡಿದ್ದಾರೆ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ತಗೆದುಕೊಳ್ಳುವ ನಿಲುವು ಕೇವಲ ಧಾರವಾಡಕ್ಕೆ ಸೀಮಿತವಲ್ಲ ಎಂದು ಸ್ಪಷ್ಟಪಡಿಸಿದರು.

ಕೇವಲ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ನಾನು ಮಾತನಾಡುತ್ತಿಲ್ಲ. ಬೇರೆ ಸಮುದಾಯದವರಿಗೂ ಅನ್ಯಾಯವಾಗಿದೆ. ಪಕ್ಷವು ಕಡಿಮೆ ಜನಸಂಖ್ಯೆ ಇರುವವರ ಹಿಡಿತದಲ್ಲಿದ್ದು, ಇದು ರಾಷ್ಟ್ರೀಯ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದರು.

ಯುದ್ಧಭೂಮಿಯಲ್ಲಿ ಎಷ್ಟ ಜನ ಇದ್ದರು, ಯಾರು ಇದ್ದರು ಎನ್ನುವುದು ಮುಖ್ಯವಲ್ಲ. ಅರ್ಜುನ, ಕೃಷ್ಣ ಇಬ್ಬರೇ ಇದ್ದರು ಎನ್ನುವುದೇ ಇತಿಹಾಸ. ‘ಮಠಾಧಿಪತಿಗಳು ರಾಜಕಾರಣಕ್ಕೆ ಬರಬಾರದು’ ಎಂದು ಸಾಮಾಜಿಕ ಜಾಲತಾಣದಲ್ಲಿ ಜೋಶಿ ಅಭಿಮಾನಿಗಳು ಹೇಳುತ್ತಿದ್ದಾರೆ. ಅವರು ಪ್ರಜ್ಞಾವಂತರಲ್ಲ, ಬದಲಿಗೆ ಜೋಶಿ ಅಭಿಮಾನಿಗಳು ಎಂದು ವಾಗ್ದಾಳಿ ನಡೆಸಿದರು.

ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನಾವು ಬರಬೇಕು ಎಂಬುದು ಜನರ ಅಭಿಪ್ರಾಯ. ನನ್ನ ಹಿಂದೆ ಬಿಜೆಪಿಯವರು ಇದ್ದಾರೆ, ಕಾಂಗ್ರೆಸ್‌ನವರೂ ಇದ್ದಾರೆ. ನನ್ನನ್ನು ಎಲ್ಲ ಪಕ್ಷದ ಪ್ರಮುಖರೂ ಸಂಪರ್ಕ ಮಾಡಿದ್ದಾರೆ. ನಾನು ಯಾರ ಹೆಸರೂ ಹೇಳಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ಸಂಪರ್ಕ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ನನ್ನನ್ನು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದಾರೆ. ವ್ಯವಸ್ಥೆ ಅಸ್ಥಿರಗೊಂಡಾಗ ಮಠಾಧಿಪತಿಗಳು ಪ್ರವೇಶ ಮಾಡುವುದು ಅನಿವಾರ್ಯ. ನಾವು ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದೆವು. ಆದರೆ, ನಾನು ರಾಜಕೀಯಕ್ಕೆ ಬರಬೇಕು ಎಂಬುದು ಜನರ ಬಯಕೆಯಾಗಿದ್ದು, ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಮಠಾಧಿಪತಿಗಳು, ಬುದ್ಧಿಜೀವಿಗಳ ಜೊತೆ ಸಾಧಕ-ಬಾಧಕ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News