ಇಂಡಿಯಾ ಒಕ್ಕೂಟ ಅಸ್ತಿತ್ವದಲ್ಲೇ ಇಲ್ಲ, ತೋರಿಕೆಗಷ್ಟೇ ಈ ಮೈತ್ರಿಕೂಟ: ಪ್ರಹ್ಲಾದ್ ಜೋಶಿ ವ್ಯಂಗ್ಯ
ಹುಬ್ಬಳ್ಳಿ: ಇಂಡಿಯಾ ಘಟಬಂಧನದ ಅಸ್ತಿತ್ವ ಎಲ್ಲಿದೆ..? ತೋರಿಕೆಗಷ್ಟೇ ಈ ಮೈತ್ರಿಕೂಟ ಇದೆ. ಮಹಾರಾಷ್ಟ, ಉತ್ತರಪ್ರದೇಶ, ಪಶ್ಚಿಮ ಬಂಗಾಳಗದಲ್ಲಿ ಇವರು ಜಗಳ ಆಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಇಂದು ಹುಬ್ಬಳ್ಳಿಯ ಉಣಕಲ್ಲ ಸಿದ್ದಪ್ಪಜ್ಜ ಮೂಲ ಗದ್ದುಗೆ ಮಠದಲ್ಲಿ ಸ್ವಚ್ಛತೆ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರವಿದೆ. ನಮ್ಮ ಕಾರ್ಯಕರ್ತರನ್ನ ಹೊಡಿಯುತ್ತಿದ್ದಾರೆ ಅಂತ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ನಿಮ್ಮಲ್ಲೇ ಪರಸ್ಪರ ಹೊಂದಾಣಿಕೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋತರೆ ಗಾಂಧಿ ಕುಟುಂಬದ ಮೇಲೆ ಅಪವಾದ ಬರಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಕ್ಕೂಟದ ನಾಯಕನನ್ನಾಗಿ ಮಾಡಿ ಬಲಿಪಶು ಮಾಡಲಾಗುತ್ತಿದೆ ಎಂದರು.
ಕಾಂಗ್ರೆಸ್ ನವರು ಯಾವ ಸ್ಥಿತಿಗೆ ಬಂದಿದ್ದಾರೆ ಅಂದ್ರೆ, ಅವರು ಸೋಲುವುದು ಗ್ಯಾರೆಂಟಿ. ಜಗ್ಗೇಶ್ ಬಾಷೆಯಲ್ಲಿ ಹೇಳೋದಾದರೆ ಢಮಾರ್ ಆಗೋದು ಗ್ಯಾರೆಂಟಿ. ಅದಕ್ಕೆ ಮಲ್ಲಿಕಾರ್ಜುನ್ ಖರ್ಗೆಯವರನ್ನು ಬಲಿ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಾನಗಲ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ ಅವರು, ಸರಕಾರದ ತುಷ್ಟೀಕರಣ ರಾಜಕಾರಣ ಸ್ಪಷ್ಟವಾಗಿ ಕಾಣುತ್ತಿದೆ. ಸಿದ್ದರಾಮಯ್ಯ ಅವರು ನೈತಿಕ ಪೊಲೀಸ್ ಗಿರಿ ಬಗ್ಗೆ ದೊಡ್ಡ ದೊಡ್ಡದಾಗಿ ಮಾತನಾಡಿದರು. ಆಕೆ ನಮ್ಮ ಸಮುದಾಯದವರೇ ಕೃತ್ಯವೆಸಗಿದ್ದಾರೆಂದು ಹೇಳಿದ್ದಾಳೆ. ಇದರಲ್ಲಿ ತುಷ್ಟೀಕರಣ ರಾಜಕಾರಣದ ವಾಸನೆ ಇದ್ದು, ಯಾವುದೇ ಜಾತಿಯವರಾದರೂ ಅಪರಾಧಿಗಳು ಅಪರಾಧಿಗಳೇ. ಸರಕಾರ ಇದರಲ್ಲಿ ತಮ್ಮ ನಿಯತ್ತನ್ನು ತೋರಿಸಲಿ ಎಂದು ಆಗ್ರಹಿಸಿದರು.