ʼಶಕ್ತಿʼ ಯೋಜನೆಯಿಂದ ಅರ್ಧದಷ್ಟು ಫಲಾನುಭವಿಗಳನ್ನು ಹೊರಗಿಡುವ ಪಯತ್ನ : ಬೊಮ್ಮಾಯಿ

Update: 2024-11-02 13:58 GMT

ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: "ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರಕಾರದಿಂದ ಶಕ್ತಿ ಯೋಜನೆ ನಿಲ್ಲಿಸುವ ಪ್ರಸ್ತಾಪ ಆರಂಭವಾಗಿದ್ದು, ಅರ್ಧದಷ್ಟು ಫಲಾನುಭವಿಗಳನ್ನು ಹೊರಗಿಡುವ ಪಯತ್ನ ಮಾಡಲಾಗುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ, ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಕೇವಲ ರಾಜಕಾರಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತರಲಾಗಿದ್ದು ಅದನ್ನು ನಿಲ್ಲಿಸುವ ಪ್ರಸ್ತಾಪ ಲೋಕಸಭಾ ಚುನಾವಣೆ ನಂತರ ಆರಂಭವಾಗಿದ್ದು, ಯಾವಾಗ ಲೋಕಸಭಾ ಚುನಾವಣೆಯಲ್ಲಿ ಲಾಭ ಆಗಲಿಲ್ಲ ಅಂದಿನಿಂದಲೇ ಇದನ್ನು ಹಂತ ಹಂತವಾಗಿ ಕಡಿತ ಮಾಡಲು ಸರಕಾರ ಹೊರಟಿತು. ಸರಕಾರ ಅಧಿಕಾರಗಳಿಂದ ಪರಿಷ್ಕರಣೆ ಮಾಡಲು ಮುಂದಾಯಿತು. ಸಾಕಷ್ಟು ಕರಾರು ಹಾಕಲಾಯಿತು, ಕೆಲವು ಮಾರ್ಪಾಡು ಮಾಡಲಾಯಿತು. ಎಷ್ಟು ಜನ ಈ ಯೋಜನೆ ಲಾಭ ಪಡೆಯುತ್ತಾರೆ. ಅದರಲ್ಲಿ ಅರ್ಧದಷ್ಟು ಕಡಿತ ಮಾಡಲಾಗಿದೆʼ ಎಂದರು.

ʼಈಗ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿ ಆಗಿದ್ದು, ಮುಖ್ಯಮಂತ್ರಿ ಎಷ್ಟೇ ಹೇಳಲಿ, ಏನೇ ಹೇಳಲಿ, ಸರಕಾರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಾ ಹೇಳುತ್ತಿಲ್ಲ. ಆಡಳಿತಾರೂಢ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ‌. ರಾಜ್ಯದಲ್ಲಿ ಒಂದು ಸಣ್ಣ ರಸ್ತೆ ದುರಸ್ತಿ ಮಾಡಲು ಆಗದಷ್ಟು ಆರ್ಥಿಕ ವ್ಯವಸ್ಥೆ ಕೆಟ್ಟಿದೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼದೊಡ್ಡ ಪ್ರಮಾಣದ ಬಜೆಟ್ ಮಂಡನೆ ಮಾಡಲಾಯಿತು. ಜನರ ತಲೆ ಮೇಲೆ 20 ಸಾವಿರ ರೂ. ಕೋಟಿಗಿಂತ ಹೆಚ್ಚು ತೆರಿಗೆ ವಿಧಿಸಲಾಯಿತು. ಸರಕಾರ ಆರ್ಥಿಕ ನಿರ್ವಹಣೆ ಮಾಡಲಾಗದಷ್ಟು ವಿಫಲ ಆಗಿದ್ದು, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಹಾಗೂ ಆರ್ಥಿಕ ಸಚಿವೆ ನಿರ್ಮಲಾ ಸಿತಾರಾಮನ್ ಅವರು ರಾಜ್ಯಕ್ಕೆ ಎಷ್ಟು ಹಣ ಕೊಡಬೇಕು ಅಷ್ಟು ಕೊಡಲಾಗಿದೆ ಎಂದು ರಾಜ್ಯ ಸರಕಾರದ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.‌ ಮುಖ್ಯಮಂತ್ರಿಗಳು ಸುಳ್ಳನ್ನೇ ಪದೇ ಪದೇ ಹೇಳುವ ಕೆಲಸ ಮಾಡುತಿದ್ದಾರೆʼ ಎಂದರು.

ಸಿಎಂ ಪ್ರಧಾನಿಗೆ ಗೌರವ ನೀಡಲಿ :

ಪ್ರಧಾನ ಮಂತ್ರಿ ಟ್ವಿಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ವಿಚಾರಕ್ಕೆ ಕಿಡಿಕಾರಿದ ಅವರು, ʼದೇಶದ ಪ್ರಧಾನಿಯನ್ನು ಹೇಗೆ ಸಂಬೋಧಿಸಬೇಕೆಂಬುದು ರಾಜ್ಯದ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೆಂದರೆ ದುರ್ದೈವ, ಮುಖ್ಯಮಂತ್ರಿಗಳು ಪ್ರಧಾನಿಗೆ ಗೌರವ ಕೊಡಬೇಕು. ಸಿದ್ದರಾಮಯ್ಯ ಅವರು ಒಬ್ಬ ರಾಜ್ಯದ ಮುಖ್ಯಮಂತ್ರಿ. ಮುಖ್ಯಮಂತ್ರಿಯಾಗಿ ಪ್ರಧಾನ ಮಂತ್ರಿಗೆ ಯಾವ ರೀತಿ ಸಂಬೋಧಿಸಬೇಕು ಅನ್ನುವುದು ಗೊತ್ತಿಲ್ಲವೇ.. ಸೌಜನ್ಯ ಮರೆತಿದ್ದಾರೆಂದರೆ ದುರ್ದೈವದ ಸಂಗತಿʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News