ವಕ್ಫ್ ಆಸ್ತಿಗಳ ಸಂರಕ್ಷಣೆ ನಮ್ಮ ಕರ್ತವ್ಯ ಆಗಬೇಕು : ಝಮೀರ್ ಅಹ್ಮದ್ ಖಾನ್

Update: 2024-09-01 17:02 GMT

ಹುಬ್ಬಳ್ಳಿ : ರಾಜ್ಯದಲ್ಲಿ ಸುಮಾರು 47 ಸಾವಿರ ವಕ್ಫ್ ಆಸ್ತಿಗಳಿದ್ದು, ಈ ಪೈಕಿ 23 ಸಾವಿರ ಆಸ್ತಿಗಳು ಒತ್ತುವರಿ, ವಿವಾದ, ನ್ಯಾಯಾಲಯದಲ್ಲಿ ದಾವೆಯಿಂದ ಕೂಡಿವೆ. ಈ ಆಸ್ತಿಗಳ ಸಂರಕ್ಷಣೆ ನಮ್ಮ ಕರ್ತವ್ಯ ಆಗಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ರವಿವಾರ ಹುಬ್ಬಳ್ಳಿಯಲ್ಲಿ ವಕ್ಫ್ ಅದಾಲತ್ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಕ್ಫ್ ಆಸ್ತಿ ಸಂರಕ್ಷಣೆ ದೇವರ ಕೆಲಸ. ನಿಮ್ಮ ಕೈಮುಗಿದು ಮನವಿ ಮಾಡುತ್ತೇನೆ. ಈ ಆಸ್ತಿ ಸಮುದಾಯದ ಒಳಿತಿಗಾಗಿ ಬಳಸಿ. ವಕ್ಫ್ ಆಸ್ತಿ ಸರಿಯಾಗಿ ನಿರ್ವಹಣೆ ಮಾಡಿದರೆ ಸರಕಾರದಿಂದ ನಾವು ಅನುದಾನ ಕೇಳುವ ಪರಿಸ್ಥಿತಿಯೇ ಬರುವುದಿಲ್ಲ ಎಂದು ಹೇಳಿದರು.

ವಕ್ಫ್ ಆಸ್ತಿ ಸಂರಕ್ಷಣೆ ಮಾಡಿ ತಾಲೂಕಿಗೊಂದು ಆಸ್ಪತ್ರೆ, ಜಿಲ್ಲೆಗೊಂದು ಮಹಿಳಾ ಕಾಲೇಜು ನಿರ್ಮಾಣ ಮಾಡಲಾಗುವುದು. ವಕ್ಫ್ ಮಂಡಳಿಯಲ್ಲಿ ಕೆಲಸ ಮಾಡುವವರಿಗೆ ಸಮುದಾಯದ ಸೇವೆ ಮಾಡುವ ಅವಕಾಶ ಸಿಗುತ್ತದೆ. ಇದೊಂದು ಪುಣ್ಯದ ಕೆಲಸ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ವಕ್ಫ್ ಬೋರ್ಡ್ ಮೂಲಕ ಜಿಲ್ಲೆಗೆ ಒಂದು ಆ್ಯಂಬುಲೆನ್ಸ್ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಒಂದು ವಾಹನ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ದರ್ಗಾಗಳನ್ನು ಅಭಿವೃದ್ಧಿ ಪಡಿಸಲು 25 ಕೋಟಿ ರೂ.ಯೋಜನೆ ಸಿದ್ದಪಡಿಸಲಾಗಿದೆ ಎಂದು ಅವರು ತಿಳಿಸಿದರು.

ವಕ್ಫ್ ಅದಾಲತ್‍ನಲ್ಲಿ ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಸಲೀಮ್ ಅಹ್ಮದ್, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಮಾಜಿ ಸಚಿವ ಹಿಂಡಸಗೇರಿ, ಮಾಜಿ ಸಂಸದ ಐ.ಎಂ.ಸನದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದರ್ಶನ್ ಸ್ಥಳಾಂತರದಲ್ಲಿ ನನ್ನ ಪಾತ್ರವಿಲ್ಲ: ‘ನಟ ದರ್ಶನ್‍ರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿರುವುದರಲ್ಲಿ ನನ್ನ ಪಾತ್ರವಿಲ್ಲ. ಪೊಲೀಸ್ ಇಲಾಖೆಯ ತೀರ್ಮಾನದಂತೆ ದರ್ಶನ್‍ರನ್ನು ಸ್ಥಳಾಂತರ ಮಾಡಲಾಗಿದೆ. ನಾನು ಬಳ್ಳಾರಿಯ ಜಿಲ್ಲಾ ಉಸ್ತುವಾರಿ ಸಚಿವ ಅಷ್ಟೇ, ರಾಜ್ಯ ಪೊಲೀಸ್ ಮಹಾನಿರ್ದೇಶಕನಲ್ಲ’

-ಝಮೀರ್ ಅಹ್ಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News