ಗದಗ: ಆ.26, 27ರಂದು ರಾಷ್ಟ್ರ ಮಟ್ಟದ ವೈದ್ಯಕೀಯ ಸಮ್ಮೇಳನ
ಗದಗ, ಆ.24: ದಕ್ಷಿಣ ವಲಯದ ಸಿಜಿಪಿ(ಕಾಲೇಜ್ ಆಫ್ ಜನರಲ್ ಪ್ರ್ಯಾಕ್ಟೀಸ್) ಸಮ್ಮೇಳನ-2023 ಆ.26, 27ರಂದು ನಗರದ ಜೀಮ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಐಎಂಎ ರಾಜ್ಯಾಧ್ಯಕ್ಷ ಶಿವಕುಮಾರ್ ಲೊಕ್ಕೋಳ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನದ ಸಮ್ಮೇಳನದಲ್ಲಿ ವಿವಿಧ ರೀತಿಯ ಚಿಕಿತ್ಸೆಯ ನೂತನ ವಿಧಾನಗಳನ್ನು ತಿಳಿದುಕೊಳ್ಳುವ, ಪರಿಚಯಿಸುವ ಕಾರ್ಯ ಮಾಡಲಾಗುತ್ತದೆ. ದೇಶ ವಿದೇಶದಿಂದ 600ಕ್ಕೂ ಹೆಚ್ಚು ವೈದ್ಯರು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಸಮ್ಮೇಳನದ ಸಂಪೂರ್ಣ ಜವಾಬ್ದಾರಿಯನ್ನು ಐಎಂಎ ಸಿಜಿಪಿ ಗದಗ ಶಾಖೆ ವಹಿಸಿಕೊಂಡಿದೆ ಎಂದರು.
ಡಾ. ಶಶಿಧರ ರೇಷ್ಮೆ ಮಾತನಾಡಿ, ಎರಡು ದಿನಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ಜರುಗುವುದು. ಪ್ರಾಥಮಿಕ ಚಿಕಿತ್ಸೆ ಕುರಿತು ಹೊಸ ವಿಧಾನಗಳ ಬಗ್ಗೆ ತಜ್ಞ ವೈದ್ಯರು ಉಪನ್ಯಾಸ ನೀಡುತ್ತಾರೆ. ಇಂಟರ್ನಶಿಪ್ ವೈದ್ಯರಿಗೆ ತುರ್ತು ಚಿಕಿತ್ಸೆ ಕುರಿತು ತಿಳಿಸಲಾಗುವುದು ಎಂದರು.
ಸಚಿವರಾದ ಎಚ್.ಕೆ. ಪಾಟೀಲ, ಶರಣಪ್ರಕಾಶ ಪಾಟೀಲ, ದಿನೇಶ ಗೂಂಡೂರಾವ್, ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಶರತ ಅಗರವಾಲ್ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಶ್ರೀಧರ ಕುರಡಗಿ, ಡಾ. ಪವನಕುಮಾರ್ ಪಾಟೀಲ, ಡಾ. ಬಿ.ಎಂ. ಆಲೂರು ಇತರರು ಉಪಸ್ಥಿತರಿದ್ದರು.