ಹಾಸನ | ಜಾನುವಾರುಗಳನ್ನು ಹುಡುಕಲು ಹೋದ ವೇಳೆ ಕಾಡಾನೆ ದಾಳಿ; ಮಹಿಳೆ ಮೃತ್ಯು
Update: 2025-02-13 16:07 IST

ದ್ಯಾವಮ್ಮ (60)
ಹಾಸನ : ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿ ಸಾಯಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.
ಮೃತರನ್ನು ಕನಗುಪ್ಪೆ ಗ್ರಾಮದ ದ್ಯಾವಮ್ಮ (60) ಎಂದು ಗುರುತಿಸಲಾಗಿದೆ. ದ್ಯಾವಮ್ಮ ಅವರು ಇಂದು ಬೆಳಿಗ್ಗೆ ಜಾನುವಾರುಗಳನ್ನು ಹುಡುಕಲು ಹೋಗಿದ್ದು, ಬಳಿಕ ಮನೆಗೆ ಬಂದಿರಲಿಲ್ಲ. ಕುಟುಂಬಸ್ಥರು ಹುಡುಕಾಟ ನಡೆಸಿದಾಗ ದ್ಯಾವಮ್ಮ ಅವರ ಮೃತದೇಹ ಮುಳ್ಳಿನ ಪೊದೆಯಲ್ಲಿ ಪತ್ತೆಯಾಗಿದೆ.
ಮಹಿಳೆಯ ದೇಹದ ಮೇಲಿನ ಗಾಯದ ಗುರುತು ಮತ್ತು ಸ್ಥಳದಲ್ಲಿ ಆನೆಯ ಹೆಜ್ಜೆ ಗುರುತು ಕಂಡುಬಂದಿದೆ ಎನ್ನಲಾಗಿದ್ದು, ಕಾಡಾನೆ ದಾಳಿಯಿಂದಲೇ ದ್ಯಾವಮ್ಮ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಸ್ಥಳಕ್ಕೆ ಅರೇಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಕಾಡಾನೆ ದಾಳಿಗೆ ಬಲಿಯಾದರಾ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ