ಹಾಸನ | ಕರ್ತವ್ಯನಿರತ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ; ವೈದ್ಯರಿಂದ ಪ್ರತಿಭಟನೆ

ಹಾಸನ: ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯ ವಿದ್ಯಾರ್ಥಿ ಮೇಲೆ ಬೆಳಗಿನ ಜಾವ 2 ಗಂಟೆ ಸಮಯದಲ್ಲಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಒಪಿಡಿ ಸೇವೆ ಬಂದ್ ಮಾಡಿ ಆಸ್ಪತ್ರೆ ಆವರಣದಲ್ಲಿ ಹಿಮ್ಸ್ ಆಸ್ಪತ್ರೆಯ ಸಾತ್ನಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ತಡರಾತ್ರಿ 2 ಗಂಟೆ ಸಮಯದಲ್ಲಿ ಚಿಕಿತ್ಸೆಗೆಂದು ಬಂದಿದ್ದ ಕೆಲ ಯುವಕರು ಚಿಕಿತ್ಸೆ ನೀಡುತ್ತಿರುವಾಗಲೇ ವಿನಾಕಾರಣ ವೈದ್ಯರ ಮೇಲೆ ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಚಿಕಿತ್ಸೆಗೆ ಬಂದ ರೋಗಿ ಕಡೆಯವರಿಂದ ಕರ್ತವ್ಯ ನಿರತ ವೈದ್ಯ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ತಮ್ಮ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ನಂತರ ಹೊರ ರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ಸಾತ್ನಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ಮುಖಂಡ ಗಗನ್ ಮಾತನಾಡಿ, ತಡರಾತ್ರಿ ವೇಳೆ ಕಾರ್ಯನಿರತ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಬಂದಿದ್ದ ನಾಲ್ವರು ವೈದ್ಯರಿಗೆ ಪ್ರಶ್ನೆ ಮಾಡಲು ಮುಂದಾಗಿದ್ದು, ಈ ವೇಳೆ ಸ್ವಲ್ಪ ತಡೆಯಿರಿ ಎಂದು ವೈದ್ಯರು ಹೇಳಿದ್ದು, ರೋಗಿಗಳು ಅದನ್ನೆ ಸಹಿಸಲಾಗದೇ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಡಾ.ತೇಜಸ್ ಮಾಧ್ಯಮದೊಂದಿಗೆ ಮಾತನಾಡಿ, ರಾತ್ರಿ 1:45ರ ಸಮಯದಲ್ಲಿ ನಾಲ್ವರು ಕುಡಿದ ನಶೆಯಲ್ಲಿ ನಮ್ಮ ಬಳಿ ನಡೆದುಕೊಂಡು ಬರುತ್ತಾರೆ. ನಮ್ಮ ವೈದ್ಯರು ಎಮರ್ಜೆನ್ಸಿ ನೋಡಲು ಹೋಗುತ್ತಿರುವ ವೇಳೆ ಈ ನಾಲ್ಕು ಜನ ಎದುರಾಗುತ್ತಾರೆ. ನಮಗೆ ಗಾಯ ಆಗಿದೆ ಆಗಿದೆ, ಸಲ್ಪ ನೋಡಿ ಎಂದಾಗ ಒಳಗೆ ಬರಲು ವೈದ್ಯರು ಹೇಳುತ್ತಾರೆ. ಇಷ್ಟಕ್ಕೆ ತಕ್ಷಣ ಏಕವಚನದಲ್ಲಿ ಹಾಗೂ ಅವಾಚ್ಯ ಪದಗಳಿಂದ ಮಾತಾಡಿದರು. ಇದನ್ನು ಕರ್ತವ್ಯ ನಿರತ ವೈದ್ಯರು ಪ್ರಶ್ನೆ ಮಾಡಿದಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಮಹಿಳಾ ವೈದ್ಯರ ಮೇಲೂ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಬೆದರಿಕೆ ಕೂಡ ಹಾಕಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ಪೊಲೀಸರು ಅವರನ್ನೆಲ್ಲಾ ಬಂದಿಸಿದ್ದಾರೆ ಎಂದು ಘಟನೆ ಬಗ್ಗೆ ಮಾಹಿತಿ ನೀಡಿದರು.