ಹಾಸನ | ಕಾಡಾನೆ ದಾಳಿ : ವ್ಯಕ್ತಿಗೆ ಗಂಭೀರ ಗಾಯ

Update: 2024-05-24 13:35 GMT
ಸಾಂದರ್ಭಿಕ ಚಿತ್ರ

ಅರೇಹಳ್ಳಿ : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸವಾರನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಅಂಥೋಣಿ ಎಸ್ಟೇಟ್ ಬಳಿಯ ಕಲ್ಲುಗಂಡಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಜೆರೋಮ್ ಡಿಸೋಜಾ(54) ಅರೇಹಳ್ಳಿ ಪಟ್ಟಣ ವ್ಯಾಪ್ತಿಯ ರೋಟರಿ ಶಾಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಜೆಸಿಂತಾ ಡಿಸೋಜಾ ಅರೇಹಳ್ಳಿ ಹೋಬಳಿಯ ಬಕ್ರವಳ್ಳಿಯ ತನ್ನ ತವರು ಮನೆಗೆ ಹೋಗಿದ್ದರು. ಈ ಹಿನ್ನಲೆಯಲ್ಲಿ ಪತ್ನಿಯನ್ನು ವಾಪಾಸ್ ಮನೆಗೆ ಕರೆದುಕೊಂಡು ಬರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕಾಡಾನೆಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ ಎನ್ನಲಾಗಿದೆ.

ಘಟನೆಯಲ್ಲಿ ಜೆರೋಮ್ ಡಿಸೋಜಾ ಅವರ ಬಲಗೈ ಮುರಿದು, ಮೈಮೇಲೆ ಗಾಯಗಳಾಗಿದ್ದು ಹಾಸನ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News