ಸಕಲೇಶಪುರದ ದೊಡ್ಡತಪ್ಪಲೆ ಬಳಿ ಮತ್ತೆ ಭೂಕುಸಿತ | ಹೆದ್ದಾರಿ ಸಂಚಾರ ಬಂದ್
ಸಕಲೇಶಪುರ : ತಾಲ್ಲೂಕಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ–75ರ ದೊಡ್ಡತಪ್ಪಲೆ ಬಳಿ ಬುಧವಾರ ಸಂಜೆ ಮತ್ತೆ ಭೂಕುಸಿತವಾಗಿದ್ದು, ಕಂಟೈನರ್ ಲಾರಿ ಸೇರಿದಂತೆ ಹಲವು ವಾಹನಗಳ ಮೇಲೆ ಮಣ್ಣು ಬಿದ್ದಿದೆ ಎಂದು ವರದಿಯಾಗಿದೆ.
ಬುಧವಾರ ಸಂಜೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಂಟೈನರ್ ಲಾರಿಯ ಮೇಲೆ ಗುಡ್ಡ ಕುಸಿತದ ರಭಸಕ್ಕೆ ಮಣ್ಣು ಬಿದ್ದ ಪರಿಣಾಮ ಕಂಟೈನರ್ ಪಲ್ಟಿಯಾಗಿದೆ. ಚಾಲಕ ಕಂಟೈನರ್ ಲಾರಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಣ್ಣಿನಡಿ ಹಲವು ವಾಹನಗಳು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬುಧವಾರ ಬೆಳಿಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಧ್ಯಾಹ್ನವಷ್ಟೇ, ನಿನ್ನೆಯ ಭೂಕುಸಿತವಾಗಿದ್ದ ಸ್ಥಳದಲ್ಲಿ ಮಣ್ಣನ್ನು ತೆರವುಗೊಳಿಸಿ ಅಧಿಕಾರಿಗಳು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಸಂಜೆಯ ವೇಳೆಗೆ ಮಳೆ ಹೆಚ್ಚಾಗಿದ್ದರಿಂದ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು, ಶಿರಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಸಂಚಾರ ಬಂದ್ ಮಾಡಲಾಗಿದೆ.