ಶಿರಾಡಿ ಘಾಟ್ನಲ್ಲಿ ಭೂಕುಸಿತ | ಮಣ್ಣಿನಡಿ ಸಿಲುಕಿದ ವಾಹನಗಳು, ರಸ್ತೆ ಸಂಚಾರ ಸ್ಥಗಿತ
Update: 2024-07-30 09:31 GMT
ಹಾಸನ : ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಬರುತ್ತಿರುವ ವಾಹನಗಳನ್ನು ಗುಂಡ್ಯದಲ್ಲೇ ಪೊಲೀಸರು ತಡೆಯುತ್ತಿದ್ದಾರೆ.
ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎರಡು ಕಾರು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣನಡಿ ಸಿಲುಕಿವೆ ಎನ್ನಲಾಗಿದೆ.
ಈ ಪರಿಸರದಲ್ಲಿ ಕಳೆದ 15 ದಿನಗಳಿಂದ ಮಣ್ಣು ಕುಸಿಯುತ್ತಿದ್ದು, ಮಂಗಳವಾರ ಮತ್ತೆ ಮಣ್ಣು ಕುಸಿದಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ.