ಸಕಲೇಶಪುರ | ರಸ್ತೆ ಬದಿಯ ಕ್ಯಾಂಟೀನ್ ಗೆ ನುಗ್ಗಿದ ಲಾರಿ: ಮೂವರು ಮೃತ್ಯು, ಮೂವರ ಸ್ಥಿತಿ ಚಿಂತಾಜನಕ
ಹಾಸನ: ಜ.14: ಗೂಡ್ಸ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕ್ಯಾಂಟಿನ್ ಗೆ ನುಗ್ಗಿ ಉರುಳಿಬಿದ್ದ ಪರಿಣಾಮ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ, ಗುಳಗಳಲೆ ಸಮೀಪ ಇಂದು ಬೆಳಗ್ಗೆ ಸಂಭವಿಸಿದೆ.
ಮೃತರಲ್ಲಿ ಓರ್ವನ ಗುರುತು ಪತ್ತೆಯಾಗಿದ್ದು, ಗಾರೆ ಕೆಲಸಕ್ಕಾಗಿ ಬಂದಿದ್ದ ಚಿತ್ರದುರ್ಗ ಮೂಲದ ವೀರೇಶ್ ಮೃತಪಟ್ಟವರು. ವೀರೇಶ್ ಸೇರಿದಂತೆ ಇನ್ನೊಬ್ಬರು ಕ್ಯಾಂಟೀನ್ ನಲ್ಲಿ ಟೀ ಕುಡಿಯುತ್ತಿದ್ದವರು ಸಾವನ್ನಪ್ಪಿದ್ದಾರೆ. ಲಾರಿಯ ಸಿಬ್ಬಂದಿ ಕೂಡಾ ಮೃತಪಟ್ಟಿದ್ದಾರೆ. ಕ್ಯಾಂಟೀನ್ ನಲ್ಲಿ ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಹೆದ್ದಾರಿಯಲ್ಲಿ ಅತೀ ವೇಗವಾಗಿ ಬರುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟೀನ್ ಗೆ ನುಗ್ಗಿದ್ದು, ಬಳಿಕ ಉರುಳಿಬಿದ್ದಿದೆ. ಈ ವೇಳೆ ಕ್ಯಾಂಟಿನ್ ಮುಂದೆ ನಿಲ್ಲಿಸಿದ್ದ ಬೈಕ್ ಗಳು ಲಾರಿಯಡಿಗೆ ಸಿಲುಕಿ ಅಪ್ಪಚ್ಚಿಯಾಗಿವೆ. ಕ್ಯಾಂಟಿನ್ ಅಕ್ಕಪಕ್ಕ ಹಾಗೂ ಹಿಂಬದಿಯಲ್ಲಿ ವಾಸದ ಮನೆಗಳಿದ್ದು, ಅದೃಷ್ಟವಶಾತ್ ಢಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದ್ದರಿಂದ ಮನೆಗಳು ಬಚಾವ್ ಆಗಿವೆ.