ಮೊಝಾಂಬಿಕ್ |ಚುನಾವಣಾ ಹಿಂಸಾಚಾರದಲ್ಲಿ 10 ಮಕ್ಕಳು ಮೃತ್ಯು
ಮಪುಟೊ : ಮೊಝಾಂಬಿಕ್ ನಲ್ಲಿ ಚುನಾವಣೋತ್ತರ ಹಿಂಸಾಚಾರದಲ್ಲಿ ಕನಿಷ್ಠ 10 ಮಕ್ಕಳು ಸಾವನ್ನಪ್ಪಿದ್ದು 36ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವುದಾಗಿ ಮಾನವ ಹಕ್ಕು ಕಾವಲು(ಎಚ್‍ಆರ್‍ಡಬ್ಲ್ಯೂ) ಏಜೆನ್ಸಿ ಹೇಳಿದೆ.
ಅಕ್ಟೋಬರ್ 9ರಂದು ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಫ್ರೆಲಿಮೊ ಪಕ್ಷ ಗೆಲುವು ಸಾಧಿಸಿದಂದಿನಿಂದ ದಕ್ಷಿಣ ಆಫ್ರಿಕಾದ ರಾಷ್ಟ್ರ ಮೊಝಾಂಬಿಕ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿರುವುದರಿಂದ ಫಲಿತಾಂಶವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ವಿಪಕ್ಷಗಳು ಹೇಳಿಕೆ ನೀಡಿವೆ. ಫಲಿತಾಂಶವನ್ನು ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಪೊಲೀಸರು ಕ್ರೂರವಾಗಿ ಹತ್ತಿಕ್ಕುತ್ತಿದ್ದಾರೆ ಎಂದು ಎಚ್‍ಆರ್‍ಡಬ್ಲ್ಯೂ ಹೇಳಿದೆ.
ಪ್ರತಿಭಟನೆ ನಡೆಸುತ್ತಿದ್ದ ಗುಂಪಿನವರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗೋಲೀಬಾರ್ ನಡೆಸಿದಾಗ ಆ ಪ್ರದೇಶದಲ್ಲಿದ್ದ 13 ವರ್ಷದ ಬಾಲಕಿಯೊಬ್ಬಳ ಕುತ್ತಿಗೆಗೆ ಗುಂಡೇಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದೇ ರೀತಿ, ಪ್ರತಿಭಟನೆಗೆ ಸಂಬಂಧವೇ ಇಲ್ಲದ ಹಲವು ಮಕ್ಕಳು ಗೋಲೀಬಾರ್ ಗೆ ಬಲಿಯಾಗಿದ್ದು ಕನಿಷ್ಠ 36 ಮಂದಿ ಗಾಯಗೊಂಡಿರುವುದಕ್ಕೆ ಪುರಾವೆಗಳಿವೆ. ನೂರಕ್ಕೂ ಅಧಿಕ ಮಕ್ಕಳನ್ನು ಪೊಲೀಸರು ಬಂಧನದಲ್ಲಿರಿಸಿದ್ದು ಈ ಬಗ್ಗೆ ಮಕ್ಕಳ ಕುಟುಂಬದವರಿಗೆ ಮಾಹಿತಿಯನ್ನೂ ನೀಡಿಲ್ಲ ಎಂದು ಹೇಳಿಕೆ ತಿಳಿಸಿದೆ.
ಹಿಂಸಾಚಾರದ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಧ್ಯಕ್ಷ ಫಿಲಿಪ್ ನ್ಯೂಸಿ ಖಂಡಿಸಿದ್ದಾರೆ. ಇತ್ತೀಚೆಗೆ ನಡೆದಿರುವ ಘರ್ಷಣೆಯಲ್ಲಿ 5 ಪೊಲೀಸರ ಸಹಿತ 19 ಮಂದಿ ಸಾವನ್ನಪ್ಪಿದ್ದು 66 ಪೊಲೀಸರ ಸಹಿತ 800ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅವರು ಹೇಳಿದ್ದು ವಿಪಕ್ಷ ಮುಖಂಡ ವೆನಾನ್ಶಿಯೊ ಮೊಂಡ್ಲಾನೆಯನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಹಿಂಸಾಚಾರದಲ್ಲಿ 67ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ. ಸುಮಾರು 2000 ಮಂದಿಯನ್ನು ಬಂಧಿಸಲಾಗಿದೆ ಎಂದು ನಾಗರಿಕ ಸಂಸ್ಥೆಗಳು ಹೇಳಿವೆ.
ಮಾತುಕತೆಯ ಆಹ್ವಾನವನ್ನು ಸ್ವೀಕರಿಸುತ್ತೇನೆ. ಆದರೆ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನೂ ಕೈ ಬಿಡಬೇಕು ಮತ್ತು ವರ್ಚುವಲ್ ವೇದಿಕೆಯ ಮೂಲಕ ಮಾತುಕತೆ ನಡೆಯಬೇಕು ಎಂದು ವೆನಾನ್ಶಿಯೊ ಮೊಂಡ್ಲಾನೆ ಪ್ರತಿಕ್ರಿಯಿಸಿದ್ದಾರೆ. ಅಕ್ಟೋಬರ್‍ನಲ್ಲಿ ನಡೆದಿದ್ದ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮ ನಡೆದು ತನ್ನ ಗೆಲುವನ್ನು ಕಸಿದುಕೊಳ್ಳಲಾಗಿದೆ ಎಂದು ಪ್ರತಿಪಾದಿಸುತ್ತಿರುವ ವೆನಾನ್ಶಿಯೊ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸರಕಾರ ಆರೋಪಿಸುತ್ತಿದೆ. ಬಂಧನ ಭೀತಿ ಎದುರಿಸುತ್ತಿರುವ ವೆನಾನ್ಶಿಯೊ ದೇಶದಿಂದ ಪಲಾಯನ ಮಾಡಿರುವುದಾಗಿ ವರದಿಯಾಗಿದೆ.