57 ದಿನ ಕಕ್ಷೆಯಲ್ಲಿದ್ದ ಬಳಿಕ ವಿದಾಯ ಹೇಳಿದ ಭೂಮಿಯ `ಪುಟಾಣಿ ಚಂದ್ರ'
ವಾಷಿಂಗ್ಟನ್ : ಚಂದ್ರನಂತೆಯೇ 57 ದಿನ ಭೂಮಿಯನ್ನು ಸುತ್ತುತ್ತಿದ್ದ `ಪುಟಾಣಿ ಚಂದ್ರ' ನವೆಂಬರ್ 25ರಂದು ಭೂಮಿಗೆ ವಿದಾಯ ಹೇಳಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ' ವರದಿ ಮಾಡಿದೆ.
2024 ಪಿಟಿ5 ಎಂದು ಹೆಸರಿಸಲಾದ ಸುಮಾರು 33 ಅಡಿ ಗಾತ್ರದ ಈ ಕ್ಷುದ್ರಗ್ರಹ ಕುದುರೆಲಾಳದ ಆಕಾರದ ಪಥದ ರೂಪದಲ್ಲಿ ಭೂಮಿಯನ್ನು ಸುತ್ತುತ್ತಿತ್ತು. ಸೂರ್ಯನ ಬಲವಾದ ಗುರುತ್ವಾಕರ್ಷಣೆಯ ಕಾರಣದಿಂದ ಭೂಮಿಯಿಂದ ದೂರ ಸರಿಯುತ್ತಿದೆ. ಆಗಸ್ಟ್ 7ರಂದು ಈ `ಪುಟಾಣಿ ಚಂದ್ರ'ನನ್ನು ನಾಸಾದ `ಅಟ್ಲಾಸ್' ವ್ಯವಸ್ಥೆ ಪತ್ತೆಹಚ್ಚಿದ್ದು ಸೆಪ್ಟಂಬರ್ 29ರಿಂದ ನವೆಂಬರ್ 25ರವರೆಗೆ ಭೂಮಿಯನ್ನು ಸುತ್ತಲಿದೆ ಎಂದು ಮಾಹಿತಿ ನೀಡಿತ್ತು. ಇದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಶಾಶ್ವತ ಚಂದ್ರನು ಭೂಮಿಯನ್ನು ಸ್ಥಿರವಾದ ರೀತಿಯಲ್ಲಿ ಸುತ್ತುತ್ತಿದ್ದರೆ, ಭೂಮಿ ಮತ್ತು ಸೂರ್ಯನ ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಸಿಲುಕಿರುವ ಪುಟಾಣಿ ಚಂದ್ರ ಕುದುರೆಲಾಳದ ಆಕಾರದಲ್ಲಿ ಭೂಮಿಯನ್ನು ಸುತ್ತುತ್ತಿತ್ತು. ಅಂದರೆ ಭೂಮಿಯನ್ನು ಪೂರ್ತಿಯಾಗಿ ಸುತ್ತದೆ, ಸೂರ್ಯನ ಗುರುತ್ವಾಕರ್ಷಣೆಯಿಂದ ಎಳೆಯಲ್ಪಟ್ಟು ಮೇಲ್ಮೈಗೆ ಸಮೀಪದಲ್ಲಿ ಹಾರಿಹೋಗುತ್ತಿತ್ತು. ಇದು 2025ರ ಜನವರಿಯಲ್ಲಿ ಮತ್ತೊಮ್ಮೆ ಭೂಮಿಗೆ ಹತ್ತಿರದಲ್ಲಿ ಕಾಣಿಸಿಕೊಳ್ಳಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.