ಕ್ಯಾಲಿಫೋರ್ನಿಯಾ: ವಿನಾಶಕಾರಿ ಕಾಡ್ಗಿಚ್ಚಿನಿಂದ 4 ಸಾವಿರ ಕಟ್ಟಡ ಭಸ್ಮ
ಕ್ಯಾಲಿಫೋರ್ನಿಯಾ: ಲಾಸ್ ಎಂಜಲೀಸ್ನಲ್ಲಿ ಕನಿಷ್ಠ ಐದು ಮಂದಿಯನ್ನು ಆಹುತಿ ಪಡೆದಿರುವ ವಿನಾಶಕಾರಿ ಸರಣಿ ಕಾಡ್ಗಿಚ್ಚು ಆರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿರುವ ನಡುವೆಯೇ ಸುಂದರ ನಗರಿಯ ಸುಮಾರು ನಾಲ್ಕು ಸಾವಿರ ಕಟ್ಟಡಗಳನ್ನು ಭಸ್ಮಗೊಳಿಸಿದೆ. ಹಗಲಿನ ವೇಳೆ ನಿರೀಕ್ಷಿಸಿದಷ್ಟು ಪ್ರಬಲ ಗಾಳಿ ಇಲ್ಲದಿದ್ದಲ್ಲಿ ಭೀಕರ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರುವಲ್ಲಿ ಸಾಧ್ಯವಾಗಬಹುದು ಎನ್ನಲಾಗಿದೆ.
ಗುರುವಾರ ಸಂಜೆ ಲಾಸ್ಎಂಜಲೀಸ್ ನಗರದ ಪಶ್ಚಿಮ ಬೆಟ್ಟಗಳಲ್ಲಿ ಹೊಸ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಮತ್ತಷ್ಟು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯ ಭೀಕರತೆ ಹಿನ್ನೆಲೆಯಲ್ಲಿ ಎರಡು ಪ್ರಮುಖ ಕಾಡ್ಗಿಚ್ಚು ಕಾಣಿಸಿಕೊಂಡ ಪ್ರದೇಶಗಳಲ್ಲಿ ಗುರುವಾರ ಸಂಜೆಯಿಂದ ಕಫ್ರ್ಯೂ ವಿಧಿಸಲಾಗಿದೆ ಎಂದು ಶೆರಿಫ್ ರಾಬರ್ಟ್ ಲುನಾ ಹೇಳಿದ್ದಾರೆ.
ಲಾಸ್ಎಂಜಲೀಸ್ ನಗರದಲ್ಲಿ ಮನೆ, ಅಪಾರ್ಟ್ಮೆಂಟ್ ಕಟ್ಟಡ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಸುಮಾರು 4 ಸಾವಿರ ಕಟ್ಟಡಗಳು ಮತ್ತು ವಾಹನಗಳು ಭಸ್ಮವಾಗಿವೆ ಎಂದು ಅಗ್ನಿಶಾಮಕ ಮುಖ್ಯಸ್ಥ ಆಂತೋನಿ ಮ್ಯಾರೋನ್ ವಿವರಿಸಿದ್ದಾರೆ.
ಲಾಸ್ಎಂಜಲೀಸ್ ಎದುರಿಸಿದ ಅತ್ಯಂತ ಭಯಾನಕ ಕಾಡ್ಗಿಚ್ಚು ಇದಾಗಿದ್ದು, ಕ್ಯಾಲಿಫೋರ್ನಿಯಾಗೆ ಹೆಚ್ಚುವರಿ ನೆರವು ನೀಡುವುದಾಗಿ ಅಧ್ಯಕ್ಷ ಜೋ ಬೈಡೇನ್ ಘೋಷಿಸಿದ್ದಾರೆ. ಬೈಡೇನ್ ಸೂಚನೆಯಂತೆ ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿಯ ಅಧಿಕಾರಿಗಳಿಂದ ತಕ್ಷಣದ ಹಾನಿಯ ಅಂದಾಜು ಮಾಡಲಾಗುತ್ತಿದೆ ಎಂದು ಮುಖ್ಯಸ್ಥ ಡೇನ್ ಕ್ರಿಸ್ವೆಲ್ ಪ್ರಕಟಿಸಿದ್ದಾರೆ.