'ಗಲ್ಫ್ ಆಫ್ ಅಮೆರಿಕ' ಹೇಳಿಕೆ: ಟ್ರಂಪ್, ಮೆಕ್ಸಿಕೊ ಅಧ್ಯಕ್ಷರ ವಾಕ್ಸಮರ
ವಾಷಿಂಗ್ಟನ್: ʼಗಲ್ಫ್ ಆಫ್ ಮೆಕ್ಸಿಕೊʼ ಪ್ರದೇಶವನ್ನು ʼಗಲ್ಫ್ ಆಫ್ ಅಮೆರಿಕʼ ಎಂದು ಮರುನಾಮಕರಣ ಮಾಡುವುದು ಸೂಕ್ತ ಎಂದು ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಮೆಕ್ಸಿಕೊ ಅಧ್ಯಕ್ಷೆ ಕ್ಲಾಡಿಯಾ ಶೀನ್‍ಬಮ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 400 ವರ್ಷ ಹಳೆಯ ನಕ್ಷೆಯನ್ನು ಅಸ್ತ್ರವಾಗಿ ಬಳಸಿಕೊಂಡು ಮೆಕ್ಸಿಕೊ ಅಧ್ಯಕ್ಷರು ಇಡೀ ಅಮೆರಿಕವನ್ನೇ ಮೆಕ್ಸಿಕನ್ ಅಮೆರಿಕ ಎಂದು ಏಕೆ ಕರೆಯಬಾರದು ಎಂದು ಪ್ರಶ್ನಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ 1607ರ ಉತ್ತರ ಅಮೆರಿಕ ನಕ್ಷೆಯನ್ನು ಪ್ರದರ್ಶಿಸಿದ ಶೀನ್‍ಬಮ್, ಈ ನಕ್ಷೆಯಲ್ಲಿ ಇಡೀ ಖಂಡವನ್ನು ಅಮೆರಿಕಾ ಮೆಕ್ಸಿಕಾನಾ (ಮೆಕ್ಸಿಕನ್ ಅಮೆರಿಕ) ಎಂದು ಗುರುತಿಸಿರುವುದನ್ನು ಗಮನಕ್ಕೆ ತಂದರು. ವ್ಯಂಗ್ಯವಾಗಿ ನಸುನಗುತ್ತಾ, ನಾವು ಏಕೆ ಮೆಕ್ಸಿಕನ್ ಅಮೆರಿಕ ಎಂದು ಕರೆಯಬಾರದು; ಇದು ಆಕರ್ಷಕವಾಗಿ ಕಾಣುತ್ತದೆಯಲ್ಲವೇ ಎಂದು ಕೇಳಿದರು.
ಅಮೆರಿಕದ ಪ್ರಾಬಲ್ಯವನ್ನು ಪ್ರತಿಫಲಿಸುವ ಸಲುವಾಗಿ ಗಲ್ಫ್ ಆಫ್ ಮೆಕ್ಸಿಕೊ ಪ್ರದೇಶವನ್ನು ಮರುನಾಮಕರಣ ಮಾಡಬೇಕು ಎಂಬ ಸಲಹೆಯನ್ನು ಟ್ರಂಪ್ ಮುಂದಿಟ್ಟಿದ್ದಾರೆ. ಗಲ್ಫ್ ಆಪ್ ಅಮೆರಿಕ ಎನ್ನುವುದು ಎಂಥ ಸುಂದರ ಹೆಸರು ಎಂದು ಮಂಗಳವಾರ ಟ್ರಂಪ್ ಉದ್ಗರಿಸಿದ್ದರು. ರಿಪಬ್ಲಿಕನ್ ಮುಖಂಡ ಮೆರ್ಜೊರಿ ಟೇಲರ್ ಗ್ರೀನ್ ತಕ್ಷಣ ಟ್ರಂಪ್ ಅವರನ್ನು ಬೆಂಬಲಿಸಿ, ಹೆಸರು ಬದಲಿಸಲು ಮಸೂದೆ ಮಂಡಿಸಬೇಕು ಎಂದು ಹೇಳಿದ್ದರು.