ಆಸ್ಟ್ರೇಲಿಯಾದಲ್ಲಿ ಜಲವಿಮಾನ ಪತನ; 3 ಪ್ರವಾಸಿಗರು ಮೃತ್ಯು, 3 ಮಂದಿಗೆ ಗಾಯ
Update: 2025-01-08 22:39 IST

PC : PTI/AP
ಸಿಡ್ನಿ: ಆಸ್ಟ್ರೇಲಿಯಾದ ಜನಪ್ರಿಯ ಪ್ರವಾಸೀ ದ್ವೀಪದಿಂದ ಟೇಕಾಫ್ ಆಗುತ್ತಿದ್ದಂತೆ ಜಲವಿಮಾನ ಪತನಗೊಂಡಿದ್ದು ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಇತರ ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ರೊಟ್ನೆಸ್ಟ್ ದ್ವೀಪದಲ್ಲಿ ಮಂಗಳವಾರ ಸಂಜೆ ಅಪಘಾತ ಸಂಭವಿಸಿದ್ದು ಜಲವಿಮಾನದಲ್ಲಿದ್ದ(ನೀರಿನ ಮೇಲಿಂದ ಟೇಕಾಫ್ ಆಗುವ ಮತ್ತು ನೀರಿನ ಮೇಲೆಯೇ ಇಳಿಯುವ ಲಘುವಿಮಾನ) 7 ಮಂದಿಯಲ್ಲಿ ಒಬ್ಬ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ರೊಟ್ನೆಸ್ಟ್ ದ್ವೀಪದಿಂದ ಪರ್ತ್‍ಗೆ ಹೊರಟಿದ್ದ ಜಲವಿಮಾನದಲ್ಲಿದ್ದ ಸ್ವಿಝರ್ಲ್ಯಾಂಡ್ ಮಹಿಳೆ, ಡೆನ್ಮಾರ್ಕ್ ಪ್ರಜೆ ಹಾಗೂ ಪರ್ತ್ ನಿವಾಸಿ ಪೈಲಟ್ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವರನ್ನು ಪರ್ತ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.