ತಾಲಿಬಾನ್ ಸಚಿವರ ಜತೆ ಭಾರತದ ವಿದೇಶಾಂಗ ಕಾರ್ಯದರ್ಶಿ ಚರ್ಚೆ
ದುಬೈ: ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಜತೆ ದುಬೈನಲ್ಲಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಫ್ಘಾನ್ ಜನತೆಯ ತುರ್ತು ಬೆಳವಣಿಗೆ ಅಗತ್ಯತೆಗೆ ಸ್ಪಂದಿಸಲು ಭಾರತ ಸಿದ್ಧ ಎಂಬ ಸಂದೇಶವನ್ನು ಮಿಸ್ರಿ ಈ ಮಾತುಕತೆ ವೇಳೆ ಅಫ್ಘಾನಿಸ್ತಾನಕ್ಕೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪ್ರತಿಯಾಗಿ ಭಾರತ ವಿರುದ್ಧದ ಚಟುವಟಿಕೆಗಳಿಗೆ ತಾಲಿಬಾನ್ ನೆಲವನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಆ ದೇಶ ಭರವಸೆ ನೀಡಿದೆ.
ತಾಲಿಬಾನ್ ಸಂಘಟನೆ 2021ರಲ್ಲಿ ಕಾಬೂಲ್ ನಿಯಂತ್ರಣ ಪಡೆದ ಬಳಿಕ ಭಾರತ, ಆ ದೇಶದ ಜತೆ ಯಾವುದೇ ಉನ್ನತ ಮಟ್ಟದ ಮಾತುಕತೆ ನಡೆಸುತ್ತಿರುವುದು ಇದೇ ಮೊದಲು. ಈ ಮೊದಲು ಜಂಟಿ ಕಾರ್ಯದರ್ಶಿ ಮಟ್ಟದ ಮಾತುಕತೆ ಕಾಬೂಲ್‍ನಲ್ಲಿ ನಡೆದಿತ್ತು.
ಪಾಕಿಸ್ತಾನಿ ತಾಲಿಬಾನ್ ಚಟುವಟಿಕೆಗಳು ಮತ್ತು ಅಫ್ಘಾನ್ ನೆಲದ ಮೇಲೆ ಪಾಕಿಸ್ತಾನ ನಡೆಸಿದ ಪ್ರತಿ ವಾಯುದಾಳಿಯ ನಡುವೆ ಉಭಯ ದೇಶಗಳ ಸಂಬಂಧ ಹದಗೆಡುತ್ತಿರುವ ನಡುವೆಯೇ ಭಾರತ ಹಾಗೂ ಅಫ್ಘಾನಿಸ್ತಾನದ ನಡುವಿನ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ವಾರವಷ್ಟೇ ಅಫ್ಘಾನಿಸ್ತಾನ- ಪಾಕಿಸ್ತಾನ ವಿವಾದದಲ್ಲಿ ಅಫ್ಘಾನಿಸ್ತಾನಕ್ಕೆ ತನ್ನ ಬೆಂಬಲವನ್ನು ಭಾರತ ಸೂಚಿಸಿತ್ತು. ಆಂತರಿಕ ಸಮಸ್ಯೆಗಳಿಗಾಗಿ ನೆರೆಯ ದೇಶದ ಮೇಲೆ ಗೂಬೆ ಕೂರಿಸುವುದು ಪಾಕಿಸ್ತಾನದ ಚಾಳಿ ಎಂದು ಭಾರತ ಪ್ರತಿಕ್ರಿಯಿಸಿತ್ತು.
ಭಾರತದ ಭದ್ರತಾ ಆತಂಕಗಳಿಗೆ ಅಫ್ಘಾನಿಸ್ತಾನ ಸ್ಪಂದಿಸಿದೆ. ಪರಸ್ಪರ ಸಂಪರ್ಕದಲ್ಲಿ ಇರಲು ಮತ್ತು ವಿವಿಧ ಹಂತಗಳಲ್ಲಿ ನಿರಂತರ ಸಂವಹನವನ್ನು ಮುಂದುವರಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಮಿಸ್ರಿ ಮುತ್ತಾಕಿ ಜತೆಗಿನ ಮಾತುಕತೆಗೆ ಸಂಬಂಧಿಸಿದಂತೆ ಭಾರತ ಹೇಳಿಕೆ ನೀಡಿದೆ. ಭಾರತದ ಭದ್ರತೆಗೆ ಧಕ್ಕೆ ತರುವ ಯಾವುದೇ ಕೃತ್ಯಗಳಿಗೆ ಅಫ್ಘಾನಿಸ್ತಾನ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಮಿಸ್ರಿ ಸ್ಪಷ್ಟಪಡಿಸಿದರು ಎಂದು ತಿಳಿದು ಬಂದಿದೆ.