ಲಾಸ್ ಏಂಜಲೀಸ್ ನಲ್ಲಿ ಭೀಕರ ಕಾಡ್ಗಿಚ್ಚಿಗೆ ಮೃತರ ಸಂಖ್ಯೆ 10ಕ್ಕೆ ಏರಿಕೆ
ಕ್ಯಾಲಿಫೋರ್ನಿಯಾ: ಲಾಸ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚಿಗೆ ಕನಿಷ್ಠ 10 ಜನರು ಮೃತಪಟ್ಟಿದ್ದು, 10,000ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ಸುಟ್ಟು ಕರಕಲಾಗಿದೆ ಎಂದು ವರದಿಯಾಗಿದೆ.
ಕಾಡ್ಗಿಚ್ಚಿಗೆ ಈವರೆಗೆ ಎಷ್ಟು ಜನರು ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಖಚಿತವಾಗಿಲ್ಲ. ಆದರೆ ಬೆಂಕಿ ಆವರಿಸಿಕೊಂಡಿರುವ ಪ್ರದೇಶದಲ್ಲಿ ಅಗ್ನಿ ಶಾಮಕದಳದಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಲಾಸ್ ಏಂಜಲೀಸ್ ನ ಅಲ್ಟಾಡೆನಾ, ಪಸಾಡೆನಾ ಮತ್ತು ಪೆಸಿಫಿಕ್ ಪಾಲಿಸೇಡ್ಸ್ ನ ಹಿಲ್ಸ್ ನ್ನು ಕಾಡ್ಗಿಚ್ಚು ಆವರಿಸಿದೆ.
ಭೀಕರ ಕಾಡಿಚ್ಚಿಗೆ ಮನೆ-ಕಟ್ಟಡಗಳು ಸುಟ್ಟುಹೋಗಿವೆ. ಸಾವಿರಾರು ಮಂದಿ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ. ಹಾಲಿವುಡ್ ನಟ-ನಟಿಯರು, ಇತರ ಸೆಲೆಬ್ರಿಟಿಗಳು ಮನೆಗಳನ್ನು ತೊರೆದಿದ್ದಾರೆ. ಆಸ್ಕರ್ ವಿಜೇತ ನಟ ಆ್ಯಂಟನಿ ಹಾಪ್ಕಿನ್ಸ್ ಅವರ ಐಷಾರಾಮಿ ಮನೆ ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ. ಸುಮಾರು 70,000 ಜನರನ್ನು ರಕ್ಷಣಾ ಪಡೆಗಳು ಸ್ಥಳಾಂತರ ಮಾಡಿವೆ.
ಲಾಸ್ ಏಂಜಲೀಸ್ ನಗರದಲ್ಲಿ ಉಂಟಾಗಿರುವ ಭೀಕರ ಕಾಡ್ಗಿಚ್ಚಿನ ಬಗ್ಗೆ ಮೆಟಾ ಕಂಪನಿ ಅಧ್ಯಕ್ಷ ಹಾಗೂ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಪ್ರತಿಕ್ರಿಯಿಸಿದ್ದು, ಈ ಭೀಕರ ವಿನಾಶದ ಫೋಟೊ ಮತ್ತು ವಿಡಿಯೊಗಳನ್ನು ನನ್ನಿಂದ ನೋಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ʼಸಾಂತಾ ಅನಾʼ ಎಂದು ಕರೆಯಲಾದ ಶಕ್ತಿಶಾಲಿ ಒಣ ಹವೆಯಿಂದ ಸೃಷ್ಟಿಯಾದ ಬೆಂಕಿಯು ತನ್ನ ಕೆನ್ನಾಲಿಗೆಗಳನ್ನು ಚಾಚಿ ಲಾಸ್ ಏಂಜಲೀಸ್ ನಲ್ಲಿ ಮನೆಗಳು ಹಾಗೂ ಕಟ್ಟಡಗಳ ಆಹುತಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.