ಲಾಸ್ ಏಂಜಲೀಸ್ ಭೀಕರ ಕಾಳ್ಗಿಚ್ಚು: ಆಘಾತ ವ್ಯಕ್ತಪಡಿಸಿದ ಮಾರ್ಕ್ ಝುಕರ್ ಬರ್ಗ್

Update: 2025-01-10 12:46 GMT

ಮಾರ್ಕ್ ಝುಕರ್ ಬರ್ಗ್ | PC : PTI

ಲಾಸ್ ಏಂಜಲೀಸ್: ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದಲ್ಲಿ ಹಬ್ಬಿರುವ ಭೀಕರ ಕಾಳ್ಗಿಚ್ಚಿನ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮೆಟಾ ಕಂಪನಿ ಮುಖ್ಯಸ್ಥ ಹಾಗೂ ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್, ನನ್ನಿಂದ ಈ ಭೀಕರ ವಿನಾಶದ ಫೋಟೊ ಹಾಗೂ ವಿಡಿಯೊಗಳನ್ನು ನೋಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಬ್ಬರ ಸುರಕ್ಷತೆಗಾಗಿ ನಾನು ಹಾಗೂ ನನ್ನ ಪತ್ನಿ ಪ್ರಿನ್ಸಿಲ್ಲ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ ಎಂದು ಹೇಳಿರುವ ಮಾರ್ಕ್ ಝುಕರ್ ಬರ್ಗ್, ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಮ್ಮ ಕಂಪನಿ ವತಿಯಿಂದ ಸುರಕ್ಷತಾ ಪರಿಶೀಲನೆ ನಡೆಸಲಾಗುತ್ತಿದ್ದು, ಲಾಸ್ ಏಂಜಲೀಸ್ ನಲ್ಲಿ ಇದುವರೆಗೆ 4 ಲಕ್ಷ ಜನ ನಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. ನೀವೆಲ್ಲರೂ ಸುರಕ್ಷಿತರಾಗಿರಿ ಎಂದು ಅವರು ಹಾರೈಸಿದ್ದಾರೆ.

ಕಾಳ್ಗಿಚ್ಚಿನಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಸಾವು-ನೋವಿನ ಪ್ರಮಾಣ ಮತ್ತಷ್ಟು ಅಧಿಕವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತಾ ಆನಾ ಗಾಳಿಯಿಂದ ಉಂಟಾದ ಕಾಳ್ಗಿಚ್ಚು ತೀವ್ರವಾಗಿ ಹಬ್ಬುತ್ತಿದೆ ಎಂದು ಹಾಲಿವುಡ್ ಹಿಲ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ನಿ ಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ಹಾಲಿವುಡ್ ಸಿನಿಮಾ ರಂಗದ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಹಾಲಿವುಡ್ ಹಿಲ್ಸ್ ನಲ್ಲಿರುವ ಹಾಲಿವುಡ್ ನ ಹಲವು ಸಿನಿ ತಾರೆಯರ ಕೋಟಿ ಕೋಟಿ ಮೌಲ್ಯದ ಮನೆಗಳು ಕಾಳ್ಗಿಚ್ಚಿಗೆ ಸುಟ್ಟು ಭಸ್ಮಗೊಂಡಿವೆ. ನೂರಾರು ಸಿನಿ ತಾರೆಯರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ತೆರಳಿದ್ದಾರೆ. ಇದರಿಂದ ವಾಹನ ದಟ್ಟಣೆ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News