ಪರಮಾಣು ಪರೀಕ್ಷೆ ನಿಷೇಧ ಒಪ್ಪಂದ ರದ್ದತಿ ಖಚಿತ: ರಶ್ಯಾ

Update: 2023-10-06 18:26 GMT

ವ್ಲಾದಿಮಿರ್ ಪುಟಿನ್ (PTI)

ಮಾಸ್ಕೊ: ಪರಮಾಣು ಪರೀಕ್ಷೆಯನ್ನು ಪುನರಾರಂಭಿಸುವ ಸಾಧ್ಯತೆಯ ಬಗ್ಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೂಚನೆ ನೀಡಿರುವ ನಂತರ, ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದದ ಅನುಮೋದನೆಯನ್ನು ವಾಪಾಸು ಪಡೆಯುವತ್ತ ದೇಶ ಶೀಘ್ರವಾಗಿ ಮುಂದುವರಿಯುತ್ತಿದೆ ಎಂದು ರಶ್ಯ ಸಂಸತ್ನ ಸ್ಪೀಕರ್ ಹೇಳಿದ್ದಾರೆ.

1962ರ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯು ಗರಿಷ್ಟ ಮಟ್ಟಕ್ಕೆ ತಲುಪಿರುವ ಸಮಯದಲ್ಲೇ ರಶ್ಯ, ಅಮೆರಿಕ ಅಥವಾ ಎರಡೂ ದೇಶಗಳು ಪರಮಾಣು ಪರೀಕ್ಷೆ ಪುನರಾರಂಭಿಸಿದರೆ ಆಳವಾದ ಅಸ್ಥಿರತೆಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ರಶ್ಯಾದ ಪರಮಾಣು ಸಿದ್ಧಾಂತವನ್ನು ನವೀಕರಿಸುವ ಅಗತ್ಯವಿಲ್ಲ. ಆದರೆ ರಶ್ಯ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸುವ ಅಗತ್ಯವಿದೆಯೇ ಎಂದು ಹೇಳಲು ಈಗಲೇ ಸಾಧ್ಯವಿಲ್ಲ . ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದ(ಸಿಟಿಬಿಟಿ)ಕ್ಕೆ ಅಮೆರಿಕ ಸಹಿ ಹಾಕಿದ್ದರೂ ಇನ್ನೂ ಅನುಮೋದಿಸಿಲ್ಲ. ಆದ್ದರಿಂದ ರಶ್ಯವು ತನ್ನ ಅನುಮೋದನೆಯನ್ನು ರದ್ದುಗೊಳಿಸುವತ್ತ ಚಿಂತನೆ ನಡೆಸುವ ಅಗತ್ಯವಿದೆ. ರಶ್ಯ ಪರಮಾಣು ಚಾಲಿತ ಮತ್ತು ಪರಮಾಣು ಸಾಮಥ್ರ್ಯದ ಬುರೆವೆಸ್ಟಿಕ್ನ್ ಕ್ರೂಸ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು ಇದರ ಸಾಮಥ್ರ್ಯಕ್ಕೆ ಸಾಟಿಯಿಲ್ಲ ಎಂದು ಗುರುವಾರ ಪುಟಿನ್ ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರಶ್ಯ ಸಂಸತ್ನ ಸ್ಪೀಕರ್ ವ್ಯಚೆಸ್ಲಾವ್ ವೊಲೊದಿನ್ ` . ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದಕ್ಕೆ ರಶ್ಯದ ಅನುಮೋದನೆಯನ್ನು ರದ್ದುಗೊಳಿಸುವ ಅಗತ್ಯದ ಬಗ್ಗೆ ಸಂಸತ್ ತುರ್ತು ಗಮನ ಹರಿಸಬೇಕಿದೆ' ಎಂದಿದ್ದಾರೆ.

ಜಗತ್ತಿನ ಪರಿಸ್ಥಿತಿ ಬದಲಾಗಿದೆ. ಅಮೆರಿಕ ಮತ್ತು ಬೆಲ್ಜಿಯಂ ನಮ್ಮ ವಿರುದ್ಧದ ಯುದ್ಧವನ್ನು ಬೆಂಬಲಿಸುತ್ತಿವೆ. ಈ ಹಿನ್ನೆಲೆಯಲ್ಲಿ ಡೂಮಾ(ರಶ್ಯ ಸಂಸತ್) ಸಮಿತಿಯ ಮುಂದಿನ ಸಭೆಯಲ್ಲಿ ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದದ ಅನುಮೋದನೆ ರದ್ದುಗೊಳಿಸುವ ಬಗ್ಗೆ ಖಂಡಿತಾ ಚರ್ಚೆ ನಡೆಯಲಿದೆ' ಎಂದವರು ಹೇಳಿದ್ದಾರೆ. ಯಾವುದೇ ದೇಶ, ಯಾವುದೇ ಭಾಗದಲ್ಲಿ ಪರಮಾಣು ಸ್ಫೋಟ ನಡೆಸುವುದನ್ನು ಈ ಒಪ್ಪಂದ ನಿಷೇಧಿಸುತ್ತದೆ.

ಪುಟಿನ್ ಆಡಿದ ಮಾತು, ಅದಕ್ಕೆ ಪೂರಕವಾಗಿ ವೊಲೊಡಿನ್ ನೀಡಿದ ಹೇಳಿಕೆಗಳು ರಶ್ಯವು ಒಪ್ಪಂದದ ಅನುಮೋದನೆಯನ್ನು ರದ್ದುಗೊಳಿಸುವುದು ಬಹುತೇಕ ಖಚಿತ ಎಂಬ ಸೂಚನೆ ನೀಡಿದೆ.

ನೆಲದಿಂದ ಉಡಾಯಿಸಬಹುದಾದ ಕಡಿಮೆ ಎತ್ತರದಲ್ಲಿ ಹಾರಾಡುವ ಈ ಕ್ರೂಸ್ ಕ್ಷಿಪಣಿಯು ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮಥ್ರ್ಯವನ್ನು ಮಾತ್ರವಲ್ಲ, ಈ ಕ್ಷಿಪಣಿಯೂ ಪರಮಾಣು ಶಕ್ತವಾಗಿದೆ. ಈ ಕ್ಷಿಪಣಿಯನ್ನು ರಶ್ಯ ತನ್ನ ಸೇನಾಪಡೆಯಲ್ಲಿ ನಿಯೋಜಿಸಿದರೆ, ಇದು ರಶ್ಯಕ್ಕೆ ಖಂಡಾಂತರ ಕ್ಷಿಪಣಿ ಸಾಮರ್ಥ್ಯದೊಂದಿಗೆ ವಿಶಿಷ್ಟ ಆಯುಧವನ್ನು ನೀಡುತ್ತದೆ' ಎಂದು ಅಮೆರಿಕ ವಾಯುಪಡೆಯ ರಾಷ್ಟ್ರೀಯ ವಾಯು ಮತ್ತು ಬಾಹ್ಯಾಕಾಶ ಗುಪ್ತಚರ ಕೇಂದ್ರದ 2020ರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಶ್ಯದಲ್ಲಿ ಪರಮಾಣು ಸಿಡಿತಲೆಗಳ ಬೃಹತ್ ದಾಸ್ತಾನು

ಸೋವಿಯತ್ ಒಕ್ಕೂಟದ ಪರಮಾಣು ಆಯುಧಗಳನ್ನು ಬಳುವಳಿಯಾಗಿ ಪಡೆದಿರುವ ರಶ್ಯವು ಜಗತ್ತಿನಲ್ಲಿ ಅತ್ಯಧಿಕ ಪರಮಾಣು ಸಿಡಿತಲೆಗಳನ್ನು ಹೊಂದಿರುವ ದೇಶವಾಗಿದೆ. 1945ರಿಂದ 1996ರ ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದದ(ಸಿಟಿಬಿಟಿ) ನಡುವಿನ ಅವಧಿಯಲ್ಲಿ 2000ಕ್ಕೂ ಅಧಿಕ ಪರಮಾಣು ಪರೀಕ್ಷೆ ನಡೆದಿದ್ದು ಇದರಲ್ಲಿ ಅಮೆರಿಕ 1,032 ಮತ್ತು ರಶ್ಯ 715 ಪರೀಕ್ಷೆಯನ್ನು ನಡೆಸಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಸೋವಿಯತ್ ಒಕ್ಕೂಟ 1990ರಲ್ಲಿ ಕಡೆಯ ಬಾರಿ, ಅಮೆರಿಕ 1992ರಲ್ಲಿ ಕಡೆಯ ಬಾರಿ ಪರಮಾಣು ಪರೀಕ್ಷೆ ನಡೆಸಿದೆ.

ಸಿಟಿಬಿಟಿಯ ಬಳಿಕ 10 ಪರಮಾಣು ಪರೀಕ್ಷೆ ನಡೆದಿದೆ. ಭಾರತ 1998ರಲ್ಲಿ ಎರಡು, ಇದೇ ವರ್ಷ ಪಾಕಿಸ್ತಾನವೂ ಎರಡು ಪರೀಕ್ಷೆ ನಡೆಸಿದ್ದರೆ ಉತ್ತರ ಕೊರಿಯಾ 2006, 2009, 2013, 2016(ಎರಡು ಬಾರಿ) ಮತ್ತು 2017ರಲ್ಲಿ ಪರಮಾಣು ಪರೀಕ್ಷೆ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News