ನೈಜೀರಿಯಾದಲ್ಲಿ ಹೊಂಚುದಾಳಿ: 26 ಭದ್ರತಾ ಸಿಬಂದಿ ಮೃತ್ಯು

Update: 2023-08-15 17:38 GMT

Photo :NDTV | ಸಾಂದರ್ಭಿಕ ಚಿತ್ರ

ಅಬುಜ: ಮಧ್ಯ ನೈಜೀರಿಯಾದಲ್ಲಿ ಬಂದೂಕುಧಾರಿಗಳು ನಡೆಸಿದ ಹೊಂಚು ದಾಳಿಯಲ್ಲಿ ಭದ್ರತಾ ಪಡೆಯ ಕನಿಷ್ಟ 26 ಸಿಬಂದಿ ಸಾವಿಗೀಡಾಗಿದ್ದು ಇತರ 8 ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆಯ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಕ್ರಿಮಿನಲ್ ಗುಂಪಿನ ಜತೆ ಯೋಧರು ಗುಂಡಿನ ಚಕಮಕಿ ನಡೆಸುತ್ತಿದ್ದ ಸ್ಥಳದಲ್ಲಿ ಗಾಯಾಳುಗಳನ್ನು ರಕ್ಷಿಸುವ ಕಾರ್ಯದಲ್ಲಿದ್ದ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡಿದ್ದು ಹೆಲಿಕಾಪ್ಟರ್ನಲ್ಲಿದ್ದವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಝುಂಗೆರು-ತೆಗಿನ ಹೆದ್ದಾರಿಯ ಬಳಿ ಹೊಂಚು ದಾಳಿ ಹಾಗೂ ಆ ಬಳಿಕದ ಗುಂಡಿನ ಚಕಮಕಿಯಲ್ಲಿ ಮೂವರು ಅಧಿಕಾರಿಗಳ ಸಹಿತ 23 ಯೋಧರು, ಮೂವರು ನಾಗರಿಕರು ಮೃತಪಟ್ಟಿದ್ದು 8 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅಲ್ಲಿಂದ ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದ ಎಂಐ-171 ಹೆಲಿಕಾಪ್ಟರ್ ಝುಂಗೆರುನಿಂದ ಟೇಕಾಫ್ ಆದ ಬಳಿಕ ಚುಕುಬ ಗ್ರಾಮದ ಬಳಿ ಪತನಗೊಂಡಿದ್ದು ಹೆಲಿಕಾಪ್ಟರ್ನಲ್ಲಿ ಇದ್ದವರ ಬಗ್ಗೆ ಮಾಹಿತಿಯಿಲ್ಲ. ದುರಂತದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ನೈಜೀರಿಯಾ ವಾಯುಪಡೆಯ ವಕ್ತಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News