ಕೆನಡಾ: ದೇವಸ್ಥಾನದ ಗೋಡೆಯಲ್ಲಿ ಭಾರತ ವಿರೋಧಿ ಪೋಸ್ಟರ್

Update: 2023-07-08 15:33 GMT

Photo: hindustantimes.com

ಒಟ್ಟಾವ: ಕೆನಡಾದ ಗ್ರೇಟರ್ ಟೊರಂಟೊ ಪ್ರದೇಶದಲ್ಲಿರುವ ದೇವಸ್ಥಾನದ ಗೋಡೆಯ ಮೇಲೆ ಭಾರತ ವಿರೋಧಿ ಪೋಸ್ಟರ್ನ ಜತೆಗೆ ಕೆನಡಾದಲ್ಲಿನ ಭಾರತದ ರಾಜತಾಂತ್ರಿಕರ ಭಾವಚಿತ್ರವನ್ನೂ ಅಂಟಿಸಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

ಗ್ರೇಟರ್ ಟೊರಂಟೊ ಪ್ರದೇಶದ ಬ್ರಾಂಪ್ಟನ್ ನಗರದಲ್ಲಿರುವ ಭಾರತ್ ಮಾತಾ ಮಂದಿರದ ಹೊರಗಡೆಯ ಗೋಡೆಯ ಮೇಲೆ ಭಾರತ ವಿರೋಧಿ ಘೋಷಣೆಯ ಜತೆಗೆ ಒಟ್ಟಾವದಲ್ಲಿನ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮ, ಟೊರಂಟೋದ ಕಾನ್ಸುಲ್ ಜನರಲ್ ಅಪೂರ್ವ ಶ್ರೀವಾಸ್ತವ ಮತ್ತು ವಾಂಕೋವರ್ನ ಕಾನ್ಸುಲ್ ಜನರಲ್ ಮನೀಷ್ ಅವರ ಭಾವಚಿತ್ರವನ್ನೂ ಪೋಸ್ಟರ್ನಲ್ಲಿ ಅಂಟಿಸಲಾಗಿದೆ.

ಜತೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿರುವ ವೀಡಿಯೊದಲ್ಲಿ ಹೈಕಮಿಷನ್ ಕಚೇರಿ ಇರುವ ಪ್ರದೇಶವನ್ನು ‘ಯುದ್ಧವಲಯ’ ಎಂದು ವೃತ್ತಾಕಾರದಲ್ಲಿ ಗುರುತಿಸಲಾಗಿದ್ದು ವರ್ಮ ಅವರ ಮುಖದತ್ತ ಗುರಿಮಾಡಿದ ಬಾಣದ ಚಿತ್ರವಿದೆ. ಜತೆಗೆ ಖಾಲಿಸ್ತಾನ್ ಪರ ಘೋಷಣೆಯಿದೆ.

ಖಾಲಿಸ್ತಾನಿ ಪರ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ)’ ಈ ಕೃತ್ಯ ಎಸಗಿದ್ದು ಗ್ರೇಟರ್ ಟೊರಂಟೊದ ಹಲವು ಕಡೆ ಇದೇ ರೀತಿಯ ಪೋಸ್ಟರ್ಗಳು ಕಂಡುಬಂದಿವೆ. ಈ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ ಬಳಿಕ ಭಾರತದ ರಾಜತಾಂತ್ರಿಕರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಈ ಮಧ್ಯೆ, ಖಾಲಿಸ್ತಾನಿ ಪರ ಸಂಘಟನೆಗಳು ಜುಲೈ 8ರಂದು ಖಾಲಿಸ್ತಾನ್ ಫ್ರೀಡಂ ಮಾರ್ಚ್ ಹಮ್ಮಿಕೊಂಡಿದ್ದಕ್ಕೆ ಪ್ರತಿಯಾಗಿ ಭಾರತೀಯ ಕೆನಡಿಯನ್ನರ ಸಂಘಟನೆಯೂ ರ್ಯಾಲಿಯನ್ನು ಹಮ್ಮಿಕೊಂಡಿದೆ. ‘ನಾವು ಇಂಡೊ-ಕೆನಡಿಯನ್ ಪರಂಪರೆಯ ಬಗ್ಗೆ ಕಾಳಜಿಯಿರುವ ನಾಗರಿಕರಾಗಿದ್ದು ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ ಕೃತ್ಯಕ್ಕೆ ಕೆನಡಾದ ಸಿದ್ಧಾಂತ, ಮೌಲ್ಯಗಳಲ್ಲಿ ಅವಕಾಶವಿಲ್ಲ. ಇತ್ತೀಚಿನ ದಿನಗಳಲ್ಲಿ ದ್ವೇಷದ ತೀವ್ರ ಹೆಚ್ಚಳವಾಗಿದ್ದರೂ ಈ ಬಗ್ಗೆ ಕೆನಡಾದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ಆತಂಕಕಾರಿಯಾಗಿದೆ’ ಎಂದು ರ್ಯಾಲಿಯ ಆಯೋಜಕರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News