ಏಲಿಯನ್ ಎನಿಮೀಸ್ ಕಾಯ್ದೆಯಡಿ ಅಮೆರಿಕಾದಿಂದ ನೂರಾರು ಮಂದಿ ಗಡೀಪಾರು

ಸಾಂದರ್ಭಿಕ ಚಿತ್ರ | PTI
ವಾಷಿಂಗ್ಟನ್ : ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿರುವ ನೂರಾರು ಮಂದಿಯನ್ನು 1798ರ ಏಲಿಯನ್ ಎನಿಮೀಸ್ ಕಾಯ್ದೆಯಡಿ ಗಡೀಪಾರು ಮಾಡುವ ಟ್ರಂಪ್ ಆಡಳಿತದ ಕ್ರಮವನ್ನು ತಡೆಯಲು ಅಮೆರಿಕಾದ ಫೆಡರಲ್ ಕೋರ್ಟ್ ಆದೇಶ ವಿಫಲವಾಗಿದೆ. ಪರ್ಯಾಯ ಯೋಜನೆ ಕುರಿತ ಮೌಖಿಕ ಆದೇಶದ ಬಗ್ಗೆ ಲಿಖಿತ ಆದೇಶದಲ್ಲಿ ಯಾವುದೇ ನಿರ್ದಿಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಟ್ರಂಪ್ ಆಡಳಿತ ಕ್ರಮ ಕೈಗೊಂಡಿದೆ.
ಎಲ್ ಸಲ್ವಡೋರ್ ನ ಕಾರಾಗೃಹಗಳಲ್ಲಿದ್ದ 200ಕ್ಕೂ ಹೆಚ್ಚು ಮಂದಿ ವೆನೆಜುವೆಲಾ ಪ್ರಜೆಗಳನ್ನು ಅಮೆರಿಕ ಸರಕಾರ ಗಡೀಪಾರು ಮಾಡಿದೆ. ಮತ್ತೊಂದು ವಿಮಾನ ಹೌಂಡುರಾಸ್‍ನತ್ತ ಮುಖ ಮಾಡಿದೆ.
ಟ್ರೆನ್ ಡೇ ಅರಾಗುವಾ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಶ್ವೇತಭವನ ಈಗಾಗಲೇ ಘೋಷಿಸಿದ್ದು, ಇದರ ಸದಸ್ಯರು ಎಂದು ಶಂಕಿಸಲಾದ 300 ಮಂದಿಯನ್ನು ಈಗಾಗಲೇ ಎಲ್ ಸಲ್ವಡೋರ್ ಬಂಧನ ಕೇಂದ್ರಕ್ಕೆ ಹಸ್ತಾಂತರಿಸಲು ಸಜ್ಜಾಗಿದೆ ಎಂದು ಎಪಿ ವರದಿ ಮಾಡಿದೆ. ಒಂದು ವರ್ಷದ ಅವಧಿಗೆ 300 ಕೈದಿಗಳ ನಿರ್ವಹಣೆಗೆ 60 ಲಕ್ಷ ಡಾಲರ್ ಮೊತ್ತವನ್ನು ಎಲ್ ಸಲ್ವಡೋರ್ ಗೆ ನೀಡಲು ಟ್ರಂಪ್ ಆಡಳಿತ ಒಪ್ಪಿಕೊಂಡಿದೆ.
ಡೊನಾಲ್ಡ್ ಟ್ರಂಪ್ ಅವರ ಶುಕ್ರವಾರದ ಆದೇಶದ ವಿರುದ್ಧ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಇ ಬೋಸ್‍ಬರ್ಗ್ ಮುಂದೆ ದಾವೆ ಹೂಡಿರುವ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ಅಂಡ್ ಡೆಮಾಕ್ರಸಿ ಫಾರ್ವರ್ಡ್ ಸಂಸ್ಥೆ, ಟೆಕ್ಸಾಸ್‍ನ ಇಮಿಗ್ರೇಶನ್ ಬಂಧನ ಕೇಂದ್ರದಲ್ಲಿ ಇರುವ ಐದು ಮಂದಿ ವೆನೆಜುವೆಲಾ ಪ್ರಜೆಗಳು ಏಲಿಯೆನ್ ಎನಿಮೀಸ್ ಕಾಯ್ದೆಯಡಿ ತಕ್ಷಣ ಗಡೀಪಾರುಗೊಳ್ಳುವ ಅಪಾಯ ಎದುರಿಸುತ್ತಿದ್ದಾರೆ ಎಂದು ವಾದಿಸಿತ್ತು.
ಟ್ರಂಪ್ ಆಡಳಿತ ಶನಿವಾರ ಈ ಕಾಯ್ದೆಯಡಿ ಗಡೀಪಾರು ಪ್ರಕ್ರಿಯೆ ಆರಂಭಿಸಿದ್ದು, ಈ ಕಾಯ್ದೆಯಡಿ ಅಕ್ರಮ ವಲಸೆಗಾರರನ್ನು ಇಮಿಗ್ರೇಶನ್ ಅಥವಾ ಫೆಡರಲ್ ಕೋರ್ಟ್ ಜಡ್ಜ್ ಮುಂದೆ ವಿಚಾರಣೆಗೆ ಗುರಿಪಡಿಸಿದೇ ಗಡೀಪಾರು ಮಾಡಲು ಅವಕಾಶವಿದೆ.