ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸುನಿತಾ ವಿಲಿಯಮ್ಸ್ ಸಂಭ್ರಮಿಸುವ ಫೋಟೊ ವೈರಲ್

Update: 2025-03-17 11:22 IST
ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸುನಿತಾ ವಿಲಿಯಮ್ಸ್ ಸಂಭ್ರಮಿಸುವ ಫೋಟೊ ವೈರಲ್
  • whatsapp icon

ವಾಷಿಂಗ್ಟನ್: ನಾಸಾ ಬಾಹ್ಯಾಕಾಶಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಒಂಬತ್ತು ತಿಂಗಳ ವಿಸ್ತರಿತ ವಾಸ್ತವ್ಯದ ಬಳಿಕ ಭೂಮಿಗೆ ಮರಳಲು ಕ್ಷಣಗಣನೆ ಆರಂಭವಾಗಿದ್ದು, ಅವರನ್ನು ಕರೆತರಲಿರುವ ಬಾಹ್ಯಾಕಾಶ ನೌಕೆ ಐಎಸ್ಎಸ್ ಹೊರಠಾಣೆಯಲ್ಲಿ ನಿಲುಗಡೆಯಾಗುತ್ತಿದ್ದಂತೆ ಬಾಹ್ಯಾಕಾಶಯಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಬುಚ್ ಹಾಗೂ ಸುನಿತಾ ಸೇರಿದಂತೆ ಸ್ಪೇಸ್ಎಕ್ಸ್ ಡ್ರಾಗನ್ ಬಾಹ್ಯಾಕಾಶನೌಕೆಯ 10 ಮಂದಿ ಐಎಸ್ಎಸ್ ನಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿರುವ ಫೋಟೊ ವೈರಲ್ ಆಗಿದೆ.

ಮೂಲತಃ ಉಭಯ ಬಾಹ್ಯಾಕಾಶ ಯಾನಿಗಳನ್ನು ವಾಪಾಸು ಕರೆ ತರಬೇಕಿದ್ದ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐಎಸ್ಎಸ್ ನಲ್ಲಿ ಇವರು ಅತಂತ್ರರಾಗಿದ್ದರು. ಹೊಸ ತಂತ್ರಜ್ಞರು ಆಗಮಿಸುತ್ತಿದ್ದಂತೆ ಸುನಿತಾ ಅವರ ಸಂಭ್ರಮ ಮುಗಿಲು ಮುಟ್ಟಿತು. ಆತ್ಮೀಯ ಆಲಿಂಗನದೊಂದಿಗೆ ಸಿಬ್ಬಂದಿಯನ್ನು ಅಭಿನಂದಿಸಿದ ಅವರು, ಫೋಟೊಗೆ ಫೋಸ್ ನೀಡಿ, ಡ್ಯಾನ್ಸ್ ಮಾಡಿ, ಸುಧೀರ್ಘ ಕಾಯುವಿಕೆಯನ್ನು ಸಂಭ್ರಮಿಸಿದರು. ಈ ಹೃದಯಸ್ಪರ್ಶಿ ಸಂವಾದದ ವಿಡಿಯೊ ಹಾಗೂ ಫೋಟೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕಳೆದ ವಾರ ಸ್ಪೇಸ್ಎಕ್ಸ್ ಮತ್ತು ನಾಸಾ, ವಿಲಿಯಮ್ಸ್ ಹಾಗೂ ವಿಲ್ಮೋರ್ ಅವರನ್ನು ಐಎಸ್ಎಸ್ ನಿಂದ ಕರೆ ತರುವ ಮಿಷನ್ ಗೆ ಚಾಲನೆ ನೀಡಿತ್ತು. ಕ್ರೂ-10 ಮಿಷನ್ ಅಂಗವಾಗಿ ಡ್ರ್ಯಾಗನ್ ಬಾಹ್ಯಾಕಾಶನೌಕೆಯನ್ನು ಹೊತ್ತಿದ್ದ ಫಾಲ್ಕರ್ 9 ರಾಕೆಟ್ ಉಡಾವಣೆಯಾಗಿತ್ತು.

ರವಿವಾರ ಬಾಹ್ಯಾಕಾಶ ನೌಕೆ ಐಎಸ್ಎಸ್ ನಲ್ಲಿ ಯಶಸ್ವಿಯಾಗಿ ನಿಲುಗಡೆಯಾದ ಬಗ್ಗೆ ಸ್ಪೇಸ್ಎಕ್ಸ್ ಸಿಇಒ ಎಲಾನ್ ಮಸ್ಕ್ ಪ್ರಕಟಣೆ ನೀಡಿದ್ದರು. ನಾಸಾ ಬಾಹ್ಯಾಕಾಶ ಯಾನಿಗಳಾದ ಆ್ಯನ್ ಮೆಕ್ಲೀನ್ ಮತ್ತು ನಿಕೋಲ್ ಆಯೇರ್ಸ್, ಜೆಎಎಕ್ಸ್ಎ ಬಾಹ್ಯಾಕಾಶ ಯಾನಿ ತಕುಯಾ ಒನಿಶಿ ಮತ್ತು ರೊಸ್ಕಾಸ್ಮಸ್ ಯಾನಿ ಕಿರಿನ್ ಪೆಸ್ಕೋವ್ ಅವರು ಐಎಸ್ಎಸ್ ಯಾನ ಬೆಳೆಸಿದ್ದರು. ಕ್ರೂ-10 ತಂಡವು ಎಕ್ಸ್ಪೆಡಿಷನ್ 72 ಸಿಬ್ಬಂದಿಯ ಜತೆ ಸೇರಿಕೊಂಡಿದ್ದು, ಬಾಹ್ಯಾಕಾಶ ಕೇಂದ್ರದಲ್ಲಿ ವಾಸ್ತವ್ಯ ಇರುವವರ ಸಂಖ್ಯೆ 11ಕ್ಕೇರಿದೆ. ಹಸ್ತಾಂತರ ಅವಧಿ ಮುಗಿದ ಬಳಿಕ ಹೇಗ್, ವಿಲಿಯಮ್ಸ್, ವಿಲ್ಮೋರ್ ಮತ್ತು ಗೊರ್ಬುನೋವ್ ಭೂಮಿಗೆ ಮರಳಲಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News