ಒಮಾನಿನಲ್ಲಿ ಭಾರೀ ಮಳೆ, ಪ್ರವಾಹ: 13 ಮಂದಿ ಸಾವು
ಮಸ್ಕತ್: ಒಮಾನ್ನಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಕನಿಷ್ಠ 13 ಮಂದಿ ಸಾವನ್ನಪ್ಪಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ `ಖಲೀಜ್ ಟೈಮ್ಸ್' ಸೋಮವಾರ ವರದಿ ಮಾಡಿದೆ.
ರವಿವಾರ ದಿಢೀರ್ ಪ್ರವಾಹಕ್ಕೆ ಸಿಲುಕಿ 9 ವಿದ್ಯಾರ್ಥಿಗಳ ಸಹಿತ ಕನಿಷ್ಟ 12 ಮಂದಿ ಸಾವನ್ನಪ್ಪಿದ್ದರು ಎಂದು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರೀಯ ಸಮಿತಿ ಹೇಳಿದೆ. ರವಿವಾರದ ಪ್ರವಾಹದಲ್ಲಿ ಉತ್ತರ ಅಲ್ಶರ್ಕಿಯಾ ಗವರ್ನರೇಟ್ನಲ್ಲಿ 4 ಮಂದಿ ನಾಪತ್ತೆಯಾಗಿದ್ದು ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಒಬ್ಬನ ಮೃತದೇಹ ಸೋಮವಾರ ಪತ್ತೆಯಾಗಿದೆ. ಮಗುವಿನ ಸಹಿತ ಇತರ ಮೂವರ ಪತ್ತೆಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರೀ ಮಳೆಯಿಂದಾಗಿ ಒಮಾನ್ನ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಶಾಲೆಯ ವಿದ್ಯಾರ್ಥಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು ಆನ್ಲೈನ್ ಮೂಲಕ ಪಾಠ ನಡೆಸುವಂತೆ ಶಾಲೆ-ಕಾಲೇಜುಗಳಿಗೆ ಸೂಚಿಸಲಾಗಿದೆ. ಕೆಲವು ಮನೆಗಳೂ ಜಲಾವೃತಗೊಂಡಿದ್ದು ಮನೆಯ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ರಸ್ತೆಬದಿ ನಿಲ್ಲಿಸಿದ್ದ ವಾಹನಗಳು ನೆರೆನೀರಲ್ಲಿ ಕೊಚ್ಚಿಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಮನ್ ಪೊಲೀಸ್ನ ವಾಯುಯಾನ ತಂಡವು ಗ್ರಾಮೀಣ ಫಾರ್ಮ್ ಒಂದರಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ 21 ಮಂದಿಯನ್ನು ಖಿರಾಯತ್ ಗವರ್ನರೇಟ್ನ ಅಲ್ಲಾಸ್ಮೊ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿದೆ. ಯುಎಇಯ ಕೆಲವು ಪ್ರದೇಶಗಳಲ್ಲೂ ಆಲಿಕಲ್ಲು ಮಳೆ, ಗುಡುಗು ಹಾಗೂ ಸಿಡಿಲಿನ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.