ಹವಾಮಾನ ಬದಲಾವಣೆ ಪ್ರಕ್ರಿಯೆಗಾಗಿ ವಿಶ್ವಸಂಸ್ಥೆ ಚೌಕಟ್ಟಿಗೆ ಭಾರತ ಬದ್ಧ : ಸಿಒಪಿ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

Update: 2023-12-01 17:57 GMT

ನರೇಂದ್ರ ಮೋದಿ | Photo: PTI 

ದುಬೈ; ಹವಾಮಾನ ಬದಲಾವಣೆ ಪ್ರಕ್ರಿಯೆಗಾಗಿ ವಿಶ್ವಸಂಸ್ಥೆ ಚೌಕಟ್ಟಿಗೆ ಭಾರತ ಬದ್ಧವಾಗಿದೆ. ಅದಕ್ಕಾಗಿಯೇ 2028ರಲ್ಲಿ ಸಿಒಪಿ ಸಮ್ಮೇಳನವನ್ನು ಭಾರತದಲ್ಲಿ ಆಯೋಜಿಸುವ ಬಗ್ಗೆ ಈ ವೇದಿಕೆಯಲ್ಲಿ ನಾವು ಪ್ರಸ್ತಾವಿಸುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದುಬೈಯಲ್ಲಿ ಸಿಒಪಿ28(ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆ)ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ‘ಇಂದು, ಈ ವೇದಿಕೆಯಿಂದ ನಾನು ಇನ್ನೊಂದು ಗ್ರಹದ ಪರ, ಹಸಿರು ಉಪಕ್ರಮದ ಪರ ಸಕ್ರಿಯ ಮತ್ತು ಸಕಾರಾತ್ಮಕ ಉಪಕ್ರಮದ ಬಗ್ಗೆ ಘೋಷಣೆ ಮಾಡುತ್ತೇನೆʼಎಂದರು. 2030ರ ವರೆಗೆ ಹೊರಸೂಸುವಿಕೆಯ ತೀವ್ರತೆಯನ್ನು ಶೇ.45ರಷ್ಟು ಕಡಿಮೆ ಮಾಡುವುದು ಭಾರತದ ಗುರಿಯಾಗಿದೆ. ಜತೆಗೆ, ಪಳೆಯುಳಿಕೆಯಲ್ಲದ ಇಂಧನ(ಸೌರ, ಗಾಳಿ ಮತ್ತು ಜಲವಿದ್ಯುತ್)ದ ಪಾಲನ್ನು 50%ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ನಾವು 2070ರ ವೇಳೆಗೆ ನಿವ್ವಳ ಶೂನ್ಯ ಗುರಿಯತ್ತ ಮುಂದುವರಿಯುತ್ತೇವೆ. ಭಾರತವು ಪ್ರಪಂಚದ ಮುಂದೆ ಪರಿಸರ ಮತ್ತು ಸಮತೋಲನದ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಿದೆ. ವಿಶ್ವದ ಜನಸಂಖ್ಯೆಯ 17%ದಷ್ಟು ಭಾರತದಲ್ಲಿ ನೆಲೆಸಿದ್ದರೂ ಜಾಗತಿಕ ಇಂಗಾಲದ ಹೊರಸೂಸುವಿಕೆಗೆ ಅದರ ಕೊಡುಗೆ 4%ಕ್ಕಿಂತಲೂ ಕಡಿಮೆಯಾಗಿದೆ.

ಎನ್ಡಿಸಿ(ರಾಷ್ಟ್ರೀಯವಾಗಿ ನಿರ್ಧರಿಸಿದ ಪ್ರಮಾಣ) ಗುರಿಗಳನ್ನು ತಲುಪುವ ಹಾದಿಯಲ್ಲಿರುವ ವಿಶ್ವದ ಕೆಲವು ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ ಎಂದು ಮೋದಿ ಹೇಳಿದರು.

ಭಾರತವು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಅನುಸರಿಸುತ್ತಿರುವಾಗಲೂ ಹವಾಮಾನ ಕ್ರಮಕ್ಕೆ ಯಾವಾಗಲೂ ಒತ್ತುನೀಡಿದೆ. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಮಾಡಿದ ಪ್ರಗತಿಯನ್ನು ಪರಿಶೀಲಿಸಲು ಸಿಒಪಿ28 ಅವಕಾಶವನ್ನು ಒದಗಿಸುತ್ತದೆ ಮತ್ತು ಹವಾಮಾನ ಕ್ರಿಯೆಯ ಭವಿಷ್ಯದ ಕ್ರಮಕ್ಕೆ ಮಾರ್ಗವನ್ನು ಸೂಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ಮೋದಿ ಮೂರು ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ, ಹಲವು ಮುಖಂಡರ ಜತೆ ದ್ವಿಪಕ್ಷೀಯ ಸಭೆಯಲ್ಲೂ ಪಾಲ್ಗೊಂಡರು. ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರ್ಝಾಗ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಮತ್ತು ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝುರನ್ನು ಭೇಟಿಯಾಗಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಯುಎಇಯ ದುಬೈಯಲ್ಲಿ ನವೆಂಬರ್ 30ರಿಂದ ಡಿಸೆಂಬರ್ 12ರವರೆಗೆ ನಡೆಯುವ ಸಿಒಪಿ28 ಶೃಂಗಸಭೆಯಲ್ಲಿ ಪ್ರಪಂಚಾದ್ಯಂತ ರಾಷ್ಟ್ರಗಳ ಮುಖ್ಯಸ್ಥರು, ಸರಕಾರದ ಸಚಿವರು, ವಿಜ್ಞಾನಿಗಳು, ಹವಾಮಾನ ಕಾರ್ಯಕರ್ತರು ಹಾಗೂ ಇತರರು ಹವಾಮಾನ ಬದಲಾವಣೆಯ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News