ಸಾಲ ಮರುಪಾವತಿ ಗಡುವು ವಿಸ್ತರಣೆಗೆ ಭಾರತ ಸಮ್ಮತಿಸಿದೆ: ಮಾಲ್ಡೀವ್ಸ್ ವಿದೇಶಾಂಗ ಸಚಿವ
ಮಾಲೆ: 200 ದಶಲಕ್ಷ ಡಾಲರ್ ಪೈಕಿ 150 ದಶಲಕ್ಷ ಡಾಲರ್ ಸಾಲದ ಮರುಪಾವತಿಯ ಗಡುವಿನ ವಿಸ್ತರಣೆಗೆ ಭಾರತವು ಸಮ್ಮತಿಸಿದೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಝಮೀರ್ ತಿಳಿಸಿದ್ದಾರೆ. 2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಈ ಹಿಂದಿನ ಸರಕಾರವು ಭಾರತದಿಂದ ಈ ಸಾಲ ಪಡೆದಿತ್ತು.
ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೂಸಾ ಝಮೀರ್, ಭಾರತಕ್ಕೆ ಪಾವತಿಸಬೇಕಿರುವ 200 ದಶಲಕ್ಷ ಡಾಲರ್ ಸಾಲದ ಪೈಕಿ 50 ದಶಲಕ್ಷ ಡಾಲರ್ ಅನ್ನು ಜನವರಿಯಲ್ಲಿ ಮರುಪಾವತಿಸಲಾಗಿದೆ. ಉಳಿದ 150 ದಶಲಕ್ಷ ಡಾಲರ್ ಸಾಲದ ಮರುಪಾವತಿ ಅವಧಿಯ ವಿಸ್ತರಣೆಗೆ ಬದಲಾಗಿ ಭಾರತವು ಯಾವುದೇ ಬೇಡಿಕೆಯನ್ನು ಇರಿಸಿಲ್ಲ ಎಂದೂ ಸ್ಪಷ್ಟಪಡಿಸಿದರು.
ಭಾರತ ನೆರವು ನೀಡಿರುವ ಯೋಜನೆಗಳ ಮರು ಪ್ರಾರಂಭ ಹಾಗೂ ಅವುಗಳನ್ನು ಪೂರ್ಣಗೊಳಿಸಲು ಸರಕಾರ ಹೊಂದಿರುವ ಬದ್ಧತೆಯನ್ನು ಒತ್ತಿ ಹೇಳಿದ ಅವರು, ಮಾಲ್ಡೀವ್ಸ್ ನಲ್ಲಿ ಭಾರತದ ನೆರವಿನೊಂದಿಗೆ ನಡೆಯುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸುವ ದಿಕ್ಕಿನಲ್ಲಿ ಮಹತ್ವದ ಪ್ರಗತಿಯಾಗಿದೆ ಎಂದೂ ತಿಳಿಸಿದರು.
ಮೇ 8ರಿಂದ 10ರ ನಡುವೆ ತಮ್ಮ ಪ್ರಪ್ರಥಮ ಅಧಿಕೃತ ದ್ವಿಪಕ್ಷೀಯ ಭೇಟಿ ನೀಡಿದ್ದ ಮೂಸಾ ಝಮೀರ್, ಭಾರತದ ಆರ್ಥಿಕ ನೆರವಿನೊಂದಿಗೆ ಪ್ರಾರಂಭಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಪ್ರಮುಖ ವಿಚಾರಗಳ ಬಗ್ಗೆ ಗಮನ ಹರಿಸುವ ಕುರಿತು ಮೇ 9ರಂದು ನಡೆದ ದ್ವಿಪಕ್ಷೀಯ ಚರ್ಚೆಯಲ್ಲಿ ನಾನು ಹಾಗೂ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತುಕತೆ ನಡೆಸಿದೆವು ಎಂದು ಹೇಳಿದರು.
ಎಸ್.ಜೈಶಂಕರ್ ರೊಂದಿಗೆ ನಡೆದ ಚರ್ಚೆಯಲ್ಲಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಜವಾಬ್ದಾರಿ ನೀಡಲಾಗಿರುವ ಸಮಿತಿಗಳ ಕಾರ್ಯನಿರ್ವಹಣಾ ಸಾಮರ್ಥ್ಯದ ಕಡೆ ಗಮನ ಹರಿಸಲಾಯಿತು ಎಂದು ಝಮೀರ್ ತಿಳಿಸಿದ್ದಾರೆ ಎಂದು psmnews.mv ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಹಿಂದಿನ ಸರಕಾರದ ಆಡಳಿತದ ಅವಧಿಯಲ್ಲಿ ಭಾರತವು ನೀಡಿರುವ ಸಾಲಗಳು ಹಾಗೂ ಅನುದಾನಗಳ ನೆರವಿನಿಂದ ಮಾಲ್ಡೀವ್ಸ್ ನಲ್ಲಿ ಭಾರಿ ಪ್ರಮಾಣದ ಉಪಕ್ರಮಗಳು ಚುರುಕುಗೊಂಡಿವೆ ಎಂದೂ ಅವರು ಹೇಳಿದರು.
ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ ನಲ್ಲಿ ಭಾರತೀಯ ಸೇನಾ ಸಿಬ್ಬಂದಿಗಳು ಕಾರ್ಯಾಚರಿಸುತ್ತಿರುವ ಮೂರು ಸೇನಾ ನೆಲೆಗಳನ್ನು ಹಿಂಪಡೆಯಬೇಕು ಎಂದು ಮುಯಿಝು ಪಟ್ಟು ಹಿಡಿದಿದ್ದರಿಂದ ಎರಡು ದೇಶಗಳ ನಡುವಿನ ಸಂಬಂಧವು ಬಿಗಡಾಯಿಸಿತ್ತು.