ಇಂಡೋನೇಶ್ಯಾ | ಭೂಕುಸಿತಕ್ಕೆ ಕನಿಷ್ಠ 27 ಮಂದಿ ಬಲಿ

Update: 2024-11-28 15:13 GMT

PC : theprint.in

ಜಕಾರ್ತ: ಇಂಡೊನೇಶ್ಯಾದ ಉತ್ತರ ಸುಮಾತ್ರ ಪ್ರಾಂತದಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಾಲ್ಕು ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು ಕನಿಷ್ಠ 27 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಪರ್ವತ ಪ್ರದೇಶದ ರಸ್ತೆಯಲ್ಲಿ ಮಿನಿ ಬಸ್ಸಿನ ಸಹಿತ ಹಲವು ವಾಹನಗಳು ಭೂಕುಸಿತದಡಿ ಸಿಲುಕಿದ್ದು ವಾಹನದಲ್ಲಿದ್ದವರ ರಕ್ಷಣಾ ಕಾರ್ಯಾಚರಣೆಗೆ ಪ್ರವಾಹ ಮತ್ತು ಭಾರೀ ಮಳೆ ಅಡ್ಡಿಯಾಗಿದೆ ಎಂದು ವಿಪತ್ತು ನಿರ್ವಹಣಾ ಏಜೆನ್ಸಿ ಹೇಳಿದೆ.

ಡೆಲಿ ಸೆರ್ಡಾಂಗ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೂಕುಸಿತದಲ್ಲಿ 7 ಮಂದಿ ಸಾವನ್ನಪ್ಪಿದ್ದು ಇತರ 20 ಮಂದಿ ಗಾಯಗೊಂಡಿದ್ದಾರೆ. ಇತರ ಎರಡು ಜಿಲ್ಲೆಗಳಲ್ಲಿ ಶೋಧ ಕಾರ್ಯದ ಸಂದರ್ಭ 20 ಮೃತದೇಹ ಪತ್ತೆಯಾಗಿದೆ. ಇದೀಗ ರಕ್ಷಣಾ ಕಾರ್ಯಕರ್ತರು ನಾಪತ್ತೆಯಾಗಿರುವವರ ಇಬ್ಬರ ಪತ್ತೆ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಉತ್ತರ ಸುಮಾತ್ರ ಪೊಲೀಸ್ ವಕ್ತಾರ ಹದಿ ವಹ್ಯುಡಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಹಲವು ಮನೆಗಳು, ಮಸೀದಿಗಳು ಹಾಗೂ ಭತ್ತದ ಗದ್ದೆಗಳು ಜಲಾವೃತಗೊಂಡು ಅಪಾರ ನಷ್ಟ ಸಂಭವಿಸಿದೆ. ಪ್ರಾಂತೀಯ ರಾಜಧಾನಿ ಮೆದಾನ್ನಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನಕ್ಕೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News