ಇಸ್ರೇಲ್-ಹಿಜ್ಬುಲ್ಲಾ ಕದನ ವಿರಾಮ ಜಾರಿ | ಶಾಂತಿ ನೆಲೆಸುವ ನಿರೀಕ್ಷೆ
ಬೈರುತ್ : ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಗುಂಪು ಹಿಜ್ಬುಲ್ಲಾ ನಡುವಿನ ಕದನ ವಿರಾಮವು ಬುಧವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 04:00 ರಿಂದಲೇ ಜಾರಿಗೆ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಅಮೆರಿಕ ಮತ್ತು ಫ್ರಾನ್ಸ್ ಮಧ್ಯಸ್ಥಿಕೆ ವಹಿಸಿದ್ದ ಒಪ್ಪಂದವನ್ನು ಇಸ್ರೇಲ್ ಮತ್ತು ಹಿಜ್ಬುಲ್ಲಾ ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಗಾಝಾ ಸಂಘರ್ಷ ಆರಂಭವಾದ ನಂತರ ಸಾವಿರಾರು ಜನರನ್ನು ಬಲಿ ತೆಗೆದಕೊಂಡ ಇಸ್ರೇಲ್-ಲೆಬನಾನಿನ ಗಡಿಯಾದ್ಯಂತ ಉಂಟಾಗಿರುವ ಸಂಘರ್ಷಕ್ಕೆ ಕದನ ವಿರಾಮವು ಅಂತ್ಯ ಹಾಡಲಿದೆ ಎಂದು ವಿಶ್ಲೇಷಿಸಲಾಗಿದೆ.
ಕದನ ವಿರಾಮ ಘೋಷಿಸುವುದಕ್ಕೂ ಮೊದಲು ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಸಭೆ ಸೇರಿತ್ತು. ಸಭೆಯಲ್ಲಿ ಕದನ ವಿರಾಮದ ಕುರಿತು ಸುಧೀರ್ಘ ಚರ್ಚೆ ನಡೆಯಿತು. ಭದ್ರತಾ ಕ್ಯಾಬಿನೆಟ್ 10-1 ಮತಗಳಲ್ಲಿ ಒಪ್ಪಂದವನ್ನು ಅನುಮೋದಿಸಿದ ಸ್ವಲ್ಪ ಸಮಯದ ನಂತರ ಬೈಡನ್ ಮಂಗಳವಾರ ಶ್ವೇತಭವನದಲ್ಲಿ ಮಾತನಾಡಿದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್‌ನ ಉಸ್ತುವಾರಿ ಪ್ರಧಾನಿ ನಜೀಬ್ ಮಿಕಾಟಿ ಅವರೊಂದಿಗೆ ಮಾತನಾಡಿದ್ದೇನೆ. ಸ್ಥಳೀಯ ಕಾಲಮಾನ 4 ಗಂಟೆಗೆ (0730 IST) ಹೋರಾಟ ಕೊನೆಗೊಳ್ಳಲಿದೆ ಎಂದು ಅವರು ಹೇಳಿದರು.
"ಈ ಕದನವಿರಾಮವನ್ನು ಈಗ ನಡೆಯುತ್ತಿರುವ ಯುದ್ಧಕ್ಕೆ ಶಾಶ್ವತ ಅಂತ್ಯಹಾಡುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಹಿಜ್ಬುಲ್ಲಾ ಮತ್ತು ಹೋರಾಟಗಾಗರರ ಗುಂಪುಗಳು ಇಸ್ರೇಲಿನ ಭದ್ರತೆಗೆ ಮತ್ತೆ ಬೆದರಿಕೆ ಹಾಕುವುದಿಲ್ಲ", ಎಂದು ಅವರು ಹೇಳಿದ್ದಾರೆ.
ಲೆಬನಾನ್‌ನ ಸೇನೆಯು ಇಸ್ರೇಲ್‌ನೊಂದಿಗಿನ ತನ್ನ ಗಡಿಯ ಸಮೀಪವಿರುವ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಂತೆ 60 ದಿನಗಳಲ್ಲಿ ಇಸ್ರೇಲ್ ಕ್ರಮೇಣ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಲಿದೆ. ಆ ಬಳಿಕ ಹಿಜ್ಬುಲ್ಲಾ ಮತ್ತೆ ತನ್ನ ನೆಲೆಯನ್ನು ಪುನರ್ನಿರ್ಮಿಸುವುದಿಲ್ಲ. ಎರಡೂ ಕಡೆಯ ನಾಗರಿಕರು ಶೀಘ್ರದಲ್ಲೇ ತಮ್ಮ ಮೂಲಸ್ಥಾನಗಳಿಗೆ ಸುರಕ್ಷಿತವಾಗಿ ಮರಳಲು ಸಾಧ್ಯವಾಗಲಿದೆ”, ಎಂದು ಬೈಡನ್ ಅಭಿಪ್ರಾಯಪಟ್ಟರು.
ಕದನ ವಿರಾಮದ ಕುರಿತು ಹಿಜ್ಬುಲ್ಲಾ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಿಜ್ಬುಲ್ಲಾ, ಫೆಲೆಸ್ತೀನಿನ ಹೋರಾಟಗಾರರ ಗುಂಪು ಹಮಾಸ್ ಬೆಂಬಲಿಸುವ ಇರಾನ್, ಕದನ ವಿರಾಮದ ಬಗ್ಗೆ ಸಾರ್ವಜನಿಕವಾಗಿ ಕದನ ವಿರಾಮದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸಾಮಾಜಿಕ-ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ಯುನೈಟೆಡ್ ಸ್ಟೇಟ್ಸ್ ನ ನಿಕಟ ಸಹಯೋಗದೊಂದಿಗೆ ಇಸ್ರೇಲ್ ಮತ್ತು ಲೆಬನಾನಿನ ಅಧಿಕಾರಿಗಳೊಂದಿಗೆ ಹಲವು ತಿಂಗಳುಗಳ ಪ್ರಯತ್ನಗಳ ಫಲವಾಗಿ ಈ ಒಪ್ಪಂದವಾಗಿದೆ" ಎಂದು ಹೇಳಿದರು.
ಲೆಬನಾನ್‌ನ ಮಿಕಾಟಿ ಒಪ್ಪಂದವನ್ನು ಸ್ವಾಗತಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ ಲೆಬನಾನ್ ಸೇನೆಯು ದಕ್ಷಿಣ ಲೆಬನಾನ್‌ನಲ್ಲಿ ಕನಿಷ್ಠ 5,000 ಸೈನಿಕರನ್ನು ನಿಯೋಜಿಸಲಿದೆ ಎಂದು ವಿದೇಶಾಂಗ ಸಚಿವ ಅಬ್ದುಲ್ಲಾ ಬೌ ಹಬೀಬ್ ಹೇಳಿದ್ದಾರೆ.
ಕದನ ವಿರಾಮವನ್ನು ಜಾರಿಗೆ ತರಲು ಸಿದ್ಧರಿದ್ದಾಗಿದ್ದೇವೆ. ಆದರೆ ಹಿಜ್ಬುಲ್ಲಾದಿಂದ ಯಾವುದೇ ಉಲ್ಲಂಘನೆ ನಡೆದರೆ ಬಲವಾಗಿ ಪ್ರತಿಕ್ರಿಯಿಸಲಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಹಿಜ್ಬುಲ್ಲಾದೊಂದಿಗಿನ ಕದನ ವಿರಾಮದಿಂದಾಗಿ ಇಸ್ರೇಲ್ ಗೆ ಇರಾನ್‌ನಿಂದ ಇರುವ ಬೆದರಿಕೆಯನ್ನು ಕೇಂದ್ರೀಕರಿಸಲು ಇಸ್ರೇಲ್‌ಗೆ ಅವಕಾಶ ನೀಡಲಿದೆ. ಅಲ್ಲದೇ ಇಸ್ರೇಲ್ ಸೈನ್ಯಕ್ಕೆ ವಿಶ್ರಾಂತಿ ಮತ್ತು ಸಾಮಾಗಿಗಳನ್ನು ಸರಬರಾಜು ಮಾಡಲು ಅವಕಾಶ ನೀಡುತ್ತದೆ. ಕಳೆದ ವರ್ಷ ಗಾಝಾದಿಂದ ಇಸ್ರೇಲ್ ಮೇಲೆ ದಾಳಿ ನಡೆದಾಗ ಈ ಪ್ರದೇಶದಲ್ಲಿ ಸಂಘರ್ಷಕ್ಕೆ ನಾಂದಿ ಹಾಡಿದ ಫೆಲೆಸ್ತೀನಿನ ಹೋರಾಟಗಾರರ ಗುಂಪು ಹಮಾಸ್ ಅನ್ನು ಈ ಕದನ ವಿರಾಮವು ಪ್ರತ್ಯೇಕಿಸಲಿದೆ ಎಂದು ನೆತನ್ಯಾಹು ಹೇಳಿದರು.