ಭ್ರಷ್ಟಾಚಾರ ನಿಗ್ರಹ ಅಭಿಯಾನ: 200ಕ್ಕೂ ಅಧಿಕ ಜೈಲು ನಿರ್ಮಿಸಿದ ಚೀನಾ
ಬೀಜಿಂಗ್: ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರ ಭ್ರಷ್ಟಾಚಾರ ನಿಗ್ರಹ ಅಭಿಯಾನಕ್ಕೆ ಪೂರಕವಾಗಿ ದೇಶದಾದ್ಯಂತ 200ಕ್ಕೂ ಹೆಚ್ಚು ವಿಶೇಷ ಬಂಧನ ಕೇಂದ್ರಗಳನ್ನು ನಿರ್ಮಿಸಿರುವುದಾಗಿ ಸಿಎನ್‍ಎನ್ ವರದಿ ಮಾಡಿದೆ.
`ಲಿಯುಝಿ ಕೇಂದ್ರಗಳು' ಎಂದು ಕರೆಯಲ್ಪಡುವ ಬಂಧನ ವ್ಯವಸ್ಥೆಗಳನ್ನು ಕಾನೂನು ಸಲಹೆಗಾರರ ಅಥವಾ ಕುಟುಂಬದ ಭೇಟಿಗೆ ಅವಕಾಶವಿಲ್ಲದೆ ಶಂಕಿತರನ್ನು ಆರು ತಿಂಗಳವರೆಗೆ ಬಂಧನಲ್ಲಿಡುವಂತೆ ವಿನ್ಯಾಸಗೊಳಿಸಲಾಗಿದೆ. 2012ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಅಧ್ಯಕ್ಷ ಕ್ಸಿ ಅವರು ಭ್ರಷ್ಟಾಚಾರ ನಿಗ್ರಹಕ್ಕೆ ಮತ್ತು ಕಮ್ಯುನಿಸ್ಟ್ ಪಾರ್ಟಿ ಹಾಗೂ ಮಿಲಿಟರಿಯ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸಲು ಆದ್ಯತೆ ನೀಡಿದ್ದರು. ಇದೀಗ ಮೂರನೇ ಅವಧಿಯಲ್ಲಿ ಅವರ ಭ್ರಷ್ಟಾಚಾರ ವಿರೋಧಿ ಹೋರಾಟವು ಅವರ ನಾಯಕತ್ವದ ನಿರ್ಣಾಯಕ ಅಂಶವಾಗಿದ್ದು ಪಕ್ಷದ ರೇಖೆಗಳನ್ನು ಮೀರಿ ಸಾರ್ವಜನಿಕ ಸಂಸ್ಥೆಗಳಿಗೆ ವಿಸ್ತರಿಸಿದೆ.
ದೌರ್ಜನ್ಯ, ನಿಂದನೆ ಮತ್ತು ಚಿತ್ರಹಿಂಸೆಗಾಗಿ ವಿವಾದಕ್ಕೆ ಒಳಗಾಗಿದ್ದ `ಶುವಾಂಗ್ಗುಯಿ' ವ್ಯವಸ್ಥೆಯ ಬದಲಾಗಿ 2028ರಲ್ಲಿ ಕ್ರೋಢೀಕರಿಸಲಾದ `ಲಿಯುಝಿ' ಕೇಂದ್ರಗಳಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿ, ಬಂಧಿತರ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ವ್ಯವಸ್ಥೆಯಿದೆ. ಕೇವಲ ಕಮ್ಯುನಿಸ್ಟ್ ಪಾರ್ಟಿಯ ಅಧಿಕಾರಿಗಳಷ್ಟೇ ಅಲ್ಲ, ಸಾರ್ವಜನಿಕ ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು, ನಾಗರಿಕ ಸೇವಕರು ಮತ್ತು ಸಾರ್ವಜನಿಕ ಸಂಸ್ಥೆಗಳ ವ್ಯವಸ್ಥಾಪಕರು, ಲಂಚ ಪಡೆದ ಆರೋಪ ಎದುರಿಸುವ ಉದ್ಯಮಿಗಳನ್ನು ಈ ಕೇಂದ್ರದ ವ್ಯಾಪ್ತಿಗೆ ಸೇರಿಸಲಾಗಿದೆ.
2017 ಮತ್ತು 2024ರ ನವೆಂಬರ್ ನಡುವಿನ ಅವಧಿಯಲ್ಲಿ 218ಕ್ಕೂ ಅಧಿಕ ಲಿಯುಝಿ ಕೇಂದ್ರಗಳನ್ನು ನಿರ್ಮಿಸಲಾಗಿದ್ದು ಕೊರೋನೋತ್ತರ ಅವಧಿಯಲ್ಲಿ ನಿರ್ಮಾಣ ಕಾರ್ಯ ವೇಗ ಪಡೆದಿದೆ. ಬಂಧನ ಕೇಂದ್ರಗಳು ಅಧಿಕಾರದ ದುರುಪಯೋಗ, ಬಲವಂತದ ತಪ್ಪೊಪ್ಪಿಗೆಗೆ ಕಾರಣವಾಗಬಹುದು. ಇಲ್ಲಿ ಬಂಧನದಲ್ಲಿ ಇಡುವವರನ್ನು ಬೆದರಿಕೆ, ಚಿತ್ರಹಿಂಸೆ ಹಾಗೂ ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗಿಸಲಾಗುತ್ತಿದೆ ಎಂಬ ಟೀಕೆ ಕೇಳಿ ಬರುತ್ತಿರುವುದಾಗಿ ಸಿಎನ್‍ಎನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.