ಗಾಝಾ | ಆರೋಗ್ಯ ವ್ಯವಸ್ಥೆ ಕುಸಿತದ ಅಂಚಿನಲ್ಲಿ ಆಸ್ಪತ್ರೆಗಳ ಮೇಲೆ ಇಸ್ರೇಲ್ ದಾಳಿಗೆ ವಿಶ್ವಸಂಸ್ಥೆ ಕಳವಳ
ಜಿನೆವಾ : ಗಾಝಾ ಪಟ್ಟಿಯಾದ್ಯಂತ ಆಸ್ಪತ್ರೆಗಳ ಮೇಲೆ ಹಾಗೂ ಅದರ ಸಮೀಪದಲ್ಲಿ ಇಸ್ರೇಲ್ ನಡೆಸುತ್ತಿರುವ ಮಾರಣಾಂತಿಕ ವೈಮಾನಿಕ ದಾಳಿಯು ಫೆಲೆಸ್ತೀನ್ ಪ್ರದೇಶದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಕುಸಿತದ ಅಂಚಿಗೆ ತಂದಿರಿಸಿದೆ ಎಂದು ಮಂಗಳವಾರ ಪ್ರಕಟಗೊಂಡಿರುವ ವಿಶ್ವಸಂಸ್ಥೆ ವರದಿ ಹೇಳಿದೆ.
ಇಂತಹ ದಾಳಿಗಳು ಇಸ್ರೇಲ್ ನ ಅಂತರಾಷ್ಟ್ರೀಯ ಕಾನೂನಿನ ಅನುಸರಣೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿಯ ವರದಿ ಹೇಳಿದೆ. ಆಸ್ಪತ್ರೆಗಳ ಮೇಲೆ ಹಾಗೂ ಸುತ್ತಮುತ್ತ ಇಸ್ರೇಲ್ ನಡೆಸುತ್ತಿರುವ ನಿರಂತರ ಬಾಂಬ್ ದಾಳಿಯಿಂದಾಗಿ ಫೆಲೆಸ್ತೀನೀಯರಿಗೆ ಆರೋಗ್ಯ ವ್ಯವಸ್ಥೆಯ ಪ್ರಯೋಜನ ಪಡೆಯಲು ತೊಡಕಾಗಿದೆ ಎಂದು `ಗಾಝಾದಲ್ಲಿ ಹಗೆತನ ಹೆಚ್ಚುತ್ತಿರುವ ಸಂದರ್ಭಗಳಲ್ಲಿ ಆಸ್ಪತ್ರೆಗಳ ಮೇಲೆ ದಾಳಿಗಳು' ಎಂಬ ಶೀರ್ಷಿಕೆಯ 23 ಪುಟಗಳ ವರದಿಯಲ್ಲಿ 2023ರ ಅಕ್ಟೋಬರ್ 7ರಿಂದ 2024ರ ಜೂನ್ 30ರವರೆಗಿನ ದಾಳಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.
ಈ ಅವಧಿಯಲ್ಲಿ 27 ಆಸ್ಪತ್ರೆಗಳು ಮತ್ತು 12 ಇತರ ವೈದ್ಯಕೀಯ ವ್ಯವಸ್ಥೆಗಳ ಮೇಲೆ ಕನಿಷ್ಠ 136 ದಾಳಿಗಳು ನಡೆದಿದ್ದು ವೈದ್ಯರು, ನರ್ಸ್‍ಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಇತರ ನಾಗರಿಕರಲ್ಲಿ ಗಮನಾರ್ಹ ಸಾವು-ನೋವುಗಳು ಸಂಭವಿಸಿವೆ ಮತ್ತು ನಾಗರಿಕ ಮೂಲಸೌಕರ್ಯಗಳು ಸಂಪೂರ್ಣ ನಾಶವಾಗದಿದ್ದರೂ ಗಣನೀಯ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಎಂದು ವರದಿ ಹೇಳಿದೆ.
ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗಳು ನಿರ್ದಿಷ್ಟವಾಗಿ ಅಂತರಾಷ್ಟ್ರೀಯ ಮಾನವೀಯ ಕಾನೂನಿನಡಿ ರಕ್ಷಿಸಲ್ಪಟ್ಟಿವೆ. (ಆಸ್ಪತ್ರೆಗಳು ಅಥವಾ ವೈದ್ಯಕೀಯ ಸಿಬ್ಬಂದಿ ಮಾನವೀಯ ಕಾರ್ಯವನ್ನು ಹೊರತುಪಡಿಸಿ, ಶತ್ರುಗಳಿಗೆ ಹಾನಿಯಾಗುವ ಕಾರ್ಯದಲ್ಲಿ ತೊಡಗಬಾರದು ಎಂಬ ಕಾನೂನಿಗೆ ಬದ್ಧರು). ಗಾಝಾದಲ್ಲಿನ ಆಸ್ಪತ್ರೆಗಳು ಹಮಾಸ್‍ನ ಮಿಲಿಟರಿ ಉದ್ದೇಶಕ್ಕೆ ಅನುಚಿತವಾಗಿ ಬಳಕೆಯಾಗುತ್ತಿವೆ ಎಂಬ ಇಸ್ರೇಲ್ ನ ನಿರಂತರ ಪ್ರತಿಪಾದನೆ ಖಚಿತಗೊಂಡಿಲ್ಲ. ಈ ಆರೋಪಗಳನ್ನು ರುಜುವಾತು ಪಡಿಸಲು ಸೂಕ್ತ ಮಾಹಿತಿ ಇದುವರೆಗೆ ಸಾರ್ವಜನಿಕರಿಗೆ ಲಭ್ಯವಾಗಿಲ್ಲ ಎಂದು ವರದಿ ಹೇಳಿದೆ.
ನಿರಂತರ ಬಾಂಬ್‍ದಾಳಿ ಮತ್ತು ಗಾಝಾದಲ್ಲಿನ ಭೀಕರ ಮಾನವೀಯ ಪರಿಸ್ಥಿತಿಯ ಜತೆಗೆ, ಗಾಝಾದ ಆಸ್ಪತ್ರೆಗಳು ಸಾವಿನ ಬಲೆಯಾಗಿ ಮಾರ್ಪಟ್ಟಿವೆ. ಯುದ್ಧದ ಸಮಯದಲ್ಲಿ ಆಸ್ಪತ್ರೆಗಳ ರಕ್ಷಣೆ ಅತೀ ಮುಖ್ಯವಾಗಿದೆ ಮತ್ತು ಇದನ್ನು ಎಲ್ಲರೂ ಗೌರವಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ.
ಆಸ್ಪತ್ರೆಗಳ ಮೇಲಿನ ದಾಳಿ ಘಟನೆಯ ಬಗ್ಗೆ ಸ್ವತಂತ್ರ, ಕೂಲಂಕುಷ, ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆ ನಡೆಸಬೇಕು. ಅಂತರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನು ಉಲ್ಲಂಘನೆಗೆ ಹೊಣೆಗಾರರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ನಿರಂಕುಶವಾಗಿ ಬಂಧಿಸಿರುವ ಎಲ್ಲಾ ವೈದ್ಯಕೀಯ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆಗೊಳಿಸಬೇಕು.
ಕಳೆದ 14 ತಿಂಗಳಿಂದ ಮುಂದುವರಿದಿರುವ ತೀವ್ರ ಸಂಘರ್ಷದಿಂದ ಧ್ವಂಸಗೊಂಡಿರುವ ವೈದ್ಯಕೀಯ ವ್ಯವಸ್ಥೆಗಳ ಮರುಸ್ಥಾಪನೆ ಮತ್ತು ಫೆಲೆಸ್ತೀನಿಯನ್ ಜನರಿಗೆ ಸಾಕಷ್ಟು ಆರೋಗ್ಯ ವ್ಯವಸ್ಥೆ ಲಭ್ಯವಾಗಿಸುವ ಬಗ್ಗೆ ಇಸ್ರೇಲ್ ಆದ್ಯತೆ ನೀಡಬೇಕು ಎಂದು ಟರ್ಕ್ ಆಗ್ರಹಿಸಿದ್ದಾರೆ.