ಗಾಝಾ ಯುದ್ಧದ ಸಂತ್ರಸ್ತರಲ್ಲಿ ಶೇ.44 ರಷ್ಟು ಮಕ್ಕಳು!
ವಿಶ್ವಸಂಸ್ಥೆ: ವಿಶ್ವದಾದ್ಯಂತ ಸುಮಾರು ಐದು ಮಕ್ಕಳಲ್ಲಿ ಒಬ್ಬರು ಯುದ್ಧದಿಂದ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
47.3 ಕೋಟಿ ಮಕ್ಕಳು ಎರಡನೇ ವಿಶ್ವಯುದ್ಧದ ನಂತರ ಕಂಡುಬರುವ ಅತ್ಯಂತ ತೀವ್ರ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ. 1990ರಿಂದ ಈ ಪ್ರಮಾಣ ಬಹುತೇಕ ದುಪ್ಪಟ್ಟಾಗಿದೆ ಎಂದು ಯುನಿಸೆಫ್ (ವಿಶ್ವಸಂಸ್ಥೆಯ ಅಂಗಸಂಸ್ಥೆ) ವರದಿ ಮಾಡಿದೆ.
22,557 ಮಕ್ಕಳ ಗಂಭೀರ ಪ್ರಮಾಣದ ಹಕ್ಕು ಉಲ್ಲಂಘನೆಯ 32,990 ಪ್ರಕರಣಗಳನ್ನು ದಾಖಲಿಸಲಾಗಿದ್ದು ಇದು ದಾಖಲೆಯಾಗಿದೆ. ಗಾಝಾದಲ್ಲಿ ಇಸ್ರೇಲ್ ನಡೆಸುವ ಯುದ್ಧದ ಸುಮಾರು 45,000 ಬಲಿಪಶುಗಳಲ್ಲಿ ಶೇ.44 ರಷ್ಟು ಮಕ್ಕಳು. ಕಳೆದ ವರ್ಷಕ್ಕೆ ಹೋಲಿಸಿದರೆ ಉಕ್ರೇನ್ ಯುದ್ಧದ 2024ರ ಪ್ರಾರಂಭದ 9 ತಿಂಗಳಲ್ಲಿ ಮಕ್ಕಳ ಸಾವು-ನೋವಿನ ಪ್ರಮಾಣ ಅಧಿಕವಾಗಿದೆ.
ಯುನಿಸೆಫ್‍ನ ಇತಿಹಾಸದಲ್ಲೇ ಸಂಘರ್ಷ ಪೀಡಿತ ಪ್ರದೇಶದಲ್ಲಿರುವ ಮಕ್ಕಳಿಗೆ 2024 ಅತ್ಯಂತ ಕೆಟ್ಟ ವರ್ಷಗಳಲ್ಲಿ ಒಂದಾಗಿದೆ ಎಂದು ಯುನಿಸೆಫ್‍ನ (ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ನಿಧಿ) ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರಿನ್ ರಸೆಲ್ ಹೇಳಿದ್ದಾರೆ.
ಶಾಂತಿಯ ಪ್ರದೇಶಗಳಲ್ಲಿ ವಾಸಿಸುವ ಮಗುವಿಗೆ ಹೋಲಿಸಿದರೆ, ಸಂಘರ್ಷದ ವಲಯಗಳಲ್ಲಿ ಬೆಳೆಯುವ ಮಗು ಶಾಲೆಯಿಂದ ಹೊರಗುಳಿಯುವ, ಅಪೌಷ್ಟಿಕತೆಯಿಂದ ಬಳಲುವ ಅಥವಾ ಮನೆಯಿಂದ ಬಲವಂತವಾಗಿ ಸ್ಥಳಾಂತರಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದು ಸಾಮಾನ್ಯ ವಿಷಯ ಎಂದಾಗಬಾರದು. ವಿಶ್ವದಲ್ಲಿ ಮುಂದುವರಿದ ಯುದ್ಧಗಳಿಂದ ಒಂದು ಪೀಳಿಗೆಯ ಮಕ್ಕಳು ಹಾನಿಗೆ ಒಳಗಾಗಲು ನಾವು ಅನುಮತಿಸುವುದಿಲ್ಲ. ಸಂಘರ್ಷ ಪೀಡಿತ ಪ್ರದೇಶದಲ್ಲಿರುವ ಮಕ್ಕಳು ಉಳಿವಿಗಾಗಿ ದೈನಂದಿನ ಹೋರಾಟ ನಡೆಸುವುದರಿಂದ ತಮ್ಮ ಬಾಲ್ಯವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಅವರ ಶಾಲೆಗಳ ಮೇಲೆ ಬಾಂಬ್ ದಾಳಿಯಾಗುತ್ತಿದೆ. ಮನೆಗಳು ದ್ವಂಸಗೊಂಡಿದೆ ಮತ್ತು ಕುಟುಂಬಗಳು ಹರಿದು ಹಂಚಿಹೋಗಿವೆ. ತಮ್ಮ ಸುರಕ್ಷತೆ ಮತ್ತು ಮೂಲಭೂತ ಜೀವನಾಧಾರಿತ ಅವಶ್ಯಕತೆಗಳನ್ನಷ್ಟೇ ಅಲ್ಲ, ಆಟವಾಡುವ, ಕಲಿಯುವ ಮತ್ತು ಬಾಲ್ಯವನ್ನು ಆನಂದಿಸುವ ಅವಕಾಶವನ್ನೂ ಮಕ್ಕಳು ಕಳೆದುಕೊಂಡಿದ್ದಾರೆ. ಈ ಮಕ್ಕಳ ವಿಷಯದಲ್ಲಿ ಜಗತ್ತು ವಿಫಲಗೊಂಡಿದೆ. 2025ರಲ್ಲಿ ಈ ಪರಿಸ್ಥಿತಿಯನ್ನು ಬದಲಾಯಿಸುವ ಮತ್ತು ಮಕ್ಕಳ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಇನ್ನಷ್ಟು ಕಾರ್ಯಗಳನ್ನು ಮಾಡಬೇಕಿದೆ ಎಂದು ಕ್ಯಾಥರಿನ್ ರಸೆಲ್ ಹೇಳಿದ್ದಾರೆ.
ಸಂಘರ್ಷ ವಲಯದಲ್ಲಿ ಅಪೌಷ್ಟಿಕತೆ ಸಮಸ್ಯೆ ಮಕ್ಕಳನ್ನು ಕಾಡುತ್ತದೆ. ಐದು ಸಂಘರ್ಷ ಪೀಡಿತ ರಾಷ್ಟ್ರಗಳಲ್ಲಿ ವಾಸಿಸುವ ಸುಮಾರು 5 ಲಕ್ಷ ಮಂದಿ ಬರಗಾಲದಿಂದ ಬಾಧಿತರಾಗಿದ್ದಾರೆ. ಈ ವರ್ಷದ ಜುಲೈಯಲ್ಲಿ ಪೋಲಿಯೊ ಪ್ರಕರಣದ ಉಲ್ಬಣ ಬೆಳಕಿಗೆ ಬಂದಿರುವುದರಿಂದ ಗಾಝಾ ಆರೋಗ್ಯ ರಕ್ಷಣೆಯ ಲಭ್ಯತೆಗೆ ಸಂಬಂಧಿಸಿದ ಬಿಕ್ಕಟ್ಟಿನ ಕೇಂದ್ರವಾಗಿದೆ. ಅಪಾಯಕಾರಿ ಪರಿಸ್ಥಿತಿಯ ಹೊರತಾಗಿಯೂ ಗಾಝಾ ಪ್ರದೇಶದಲ್ಲಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಡೆದ ಪೋಲಿಯೊ ಅಭಿಯಾನ ಶೇ. 90 ಮಕ್ಕಳನ್ನು ತಲುಪಿದೆ. ಆದರೆ ವಿಶ್ವದಲ್ಲಿ ಲಸಿಕೆ ಪಡೆಯದ ಮಕ್ಕಳಲ್ಲಿ ಶೇ.40 ರಷ್ಟು ಮಕ್ಕಳು ಸಂಘರ್ಷ ಪೀಡಿತ ಪ್ರದೇಶದಲ್ಲಿ ನೆಲೆಸುತ್ತಿದ್ದಾರೆ ಎಂದು ಯುನಿಸೆಫ್ ವರದಿ ಹೇಳಿದೆ.
► 5.2 ಕೋಟಿ ಮಕ್ಕಳು ಶಿಕ್ಷಣಾವಕಾಶದಿಂದ ವಂಚಿತರು
ವಿಶ್ವದಲ್ಲಿ 5.2 ಕೋಟಿಗೂ ಹೆಚ್ಚು ಮಕ್ಕಳು ಶಿಕ್ಷಣಾವಕಾಶದಿಂದ ವಂಚಿತರಾಗಿದ್ದು ಈ ಬಿಕ್ಕಟ್ಟಿನಲ್ಲಿ ಗಾಝಾ ಮತ್ತು ಸುಡಾನ್ ಮುಂಚೂಣಿಯಲ್ಲಿ ನಿಂತಿದೆ ಎಂದು ಯುನಿಸೆಫ್ ಹೇಳಿದೆ. ಗಾಝಾದಲ್ಲಿ ಶೇ.96 ಮಕ್ಕಳು ಸಾವು ಸನ್ನಿಹಿತವಾಗಿದೆ ಎಂದು ನಂಬುತ್ತಾರೆ.
ಸುಮಾರು ಶೇ.50ರಷ್ಟು ಮಕ್ಕಳು ಮಾನಸಿಕ ಆಘಾತವನ್ನು ಎದುರಿಸುವುದಕ್ಕಿಂತ ಸಾಯುವುದು ಲೇಸು ಎಂಬ ಸ್ಥಿತಿಯಲ್ಲಿದ್ದಾರೆ ಎಂದು `ದಿ ಚಾರಿಟಿ ವಾರ್ ಚೈಲ್ಡ್' ಎಂಬ ಎನ್‍ಜಿಒ ಸಂಸ್ಥೆ ವರದಿ ಮಾಡಿದೆ.