ಕೆನಡಾ | ಲ್ಯಾಂಡಿಂಗ್ ವೇಳೆ ಏರ್ ಕೆನಡಾ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ
Update: 2024-12-29 08:13 GMT
ಒಟ್ಟಾವಾ: ಕೆನಡಾದ ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಜಾರಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯ ಭಯಾನಕ ದೃಶ್ಯವು ವೈರಲ್ ಆಗಿದೆ.
ಸೇಂಟ್ ಜಾನ್ಸ್ ನಿಂದ ಬರುತ್ತಿದ್ದ ʼಏರ್ ಕೆನಡಾ ವಿಮಾನ 2259ʼ ಲ್ಯಾಂಡಿಂಗ್ ಗೆ ಮೊದಲು ರನ್ ವೇಯಿಂದ ಕೆಳಕ್ಕೆ ಜಾರಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ವಿಮಾನದ ಲ್ಯಾಂಡಿಂಗ್ ವೇಳೆ ಗೇರ್ ವೈಫಲ್ಯದಿಂದಾಗಿ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ರಕ್ಷಣಾ ಸಿಬ್ಬಂದಿಗಳು ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಜಾಗೃತಾ ಕ್ರಮವಾಗಿ ಕೆನಡಾದ ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣದಲ್ಲಿನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.