ದಕ್ಷಿಣ ಕೊರಿಯಾ | ಮಿಲಿಟರಿ ಕಾನೂನು ಜಾರಿ ಸಂದರ್ಭ ಗುಂಡಿಕ್ಕಲು ಮಿಲಿಟರಿಗೆ ಅಧಿಕಾರ ನೀಡಿದ್ದ ಯೂನ್ ಸುಕ್ : ವರದಿ

Update: 2024-12-29 16:11 GMT

ಯೂನ್ ಸುಕ್ ಯಿಯೋಲ್ PC : PTI/AP

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಮಿಲಿಟರಿ ಕಾನೂನು ಜಾರಿಗೊಂಡಿದ್ದ ಸಂದರ್ಭ ಅಗತ್ಯಬಿದ್ದರೆ ಗುಂಡು ಹಾರಿಸಲು ಅಥವಾ ಸಂಸತ್ ಭವನ ಪ್ರವೇಶಿಸಲು ಮಿಲಿಟರಿಗೆ ಪದಚ್ಯುತ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅಧಿಕಾರ ನೀಡಿದ್ದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವರದಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಡಿಸೆಂಬರ್ 3ರಂದು ಮಿಲಿಟರಿ ಕಾನೂನು ಜಾರಿಗೊಳಿಸಲು ಆಗ ಅಧ್ಯಕ್ಷರಾಗಿದ್ದ ಯೂನ್ ಸುಕ್ ಯೆಯೋಲ್‍ಗೆ ಶಿಫಾರಸು ಮಾಡಿದ್ದ ಪದಚ್ಯುತ ರಕ್ಷಣಾ ಸಚಿವ ಕಿಮ್ ಯಾಂಗ್ ಹ್ಯೂನ್ ಅವರನ್ನು ದೋಷಾರೋಪಣೆಗೊಳಿಸುವ 10 ಪುಟಗಳ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ಮಿಲಿಟರಿ ಕಾನೂನು ಜಾರಿ ಘೋಷಣೆಯನ್ನು ವಿರೋಧಿಸಿ ಸಂಸದರು ಸಂಸತ್ ಭವನದಲ್ಲಿ ಸಭೆ ಸೇರಿದ್ದಾಗ ಭಾರೀ ಶಸ್ತ್ರಸಜ್ಜಿತ ಸೇನಾ ತುಕಡಿ ಸಂಸತ್ ಭವನದ ಕಟ್ಟಡದೊಳಗೆ ಪ್ರವೇಶಿಸಿ ಬ್ಯಾರಿಕೇಡ್‍ಗಳ ಮೇಲೇರಿ ಕಿಟಕಿಗಳ ಗಾಜನ್ನು ಒಡೆದಿದ್ದರು. ಸೇನಾ ತುಕಡಿ ಸಂಸತ್ ಭವನದ ಒಳಗೆ ನುಗ್ಗಬೇಕು ಮತ್ತು ಅಗತ್ಯಬಿದ್ದರೆ ಗುಂಡು ಹಾರಿಸಬೇಕೆಂದು ಯೂನ್ ಸುಕ್ ರಾಜಧಾನಿ ರಕ್ಷಣಾ ಪಡೆಯ ಕಮಾಂಡರ್ ಲೀ ಜಿನ್-ವೂ ಅವರಿಗೆ ಆದೇಶಿಸಿದ್ದರು.

`ನೀವಿನ್ನೂ ಒಳಪ್ರವೇಶಿಸಿಲ್ಲವೇ ? ಏನು ಮಾಡುತ್ತಿದ್ದೀರಿ? ಬಾಗಿಲನ್ನು ಮುರಿಯಿರಿ ಮತ್ತು ಅವರನ್ನು ಹೊರಗೆ ಎಳೆಯಿರಿ' ಎಂದು ಸೂಚಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದು ಏಕಪಕ್ಷೀಯ ವರದಿಯಾಗಿದ್ದು ವಸ್ತುನಿಷ್ಠ ಸಂದರ್ಭಗಳಿಗೆ ಅಥವಾ ಸಾಮಾನ್ಯ ಜ್ಞಾನಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಯೂನ್ ಸುಕ್ ಅವರ ವಕೀಲರು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News