ಪಾಕಿಸ್ತಾನ | ಜನಾಂಗೀಯ ಹಿಂಸಾಚಾರಕ್ಕೆ 10 ಮಂದಿ ಬಲಿ
ಪೇಷಾವರ : ಪಾಕಿಸ್ತಾನದಲ್ಲಿ ಕದನ ವಿರಾಮದ ನಡುವೆಯೇ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಮತ್ತೆ ಘರ್ಷಣೆ ನಡೆದು ಕನಿಷ್ಟ 10 ಮಂದಿ ಹತರಾಗಿದ್ದಾರೆ. ಇತರ 21 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ಬುಧವಾರ ವರದಿ ಮಾಡಿದೆ.
ವಾಯವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾದ, ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಕುರ್ರಮ್ ಜಿಲ್ಲೆಯಲ್ಲಿ ಎರಡು ಬುಡಕಟ್ಟು ಸಮುದಾಯದ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಶುಕ್ರವಾರ ಈ ಎರಡು ಬುಡಕಟ್ಟುಗಳ ನಡುವೆ ನಡೆದ ಭೀಕರ ಸಂಘರ್ಷದಲ್ಲಿ ಕನಿಷ್ಟ 47 ಮಂದಿ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿದ್ದರು. ಬಳಿಕ ರವಿವಾರ ಪ್ರಾಂತೀಯ ಸರಕಾರ ಹಾಗೂ ಎರಡೂ ಬುಡಕಟ್ಟುಗಳ ಮುಖಂಡರ ನಡುವೆ ನಡೆದ ಮಾತುಕತೆಯಲ್ಲಿ ಒಂದು ವಾರದ ಕದನ ವಿರಾಮಕ್ಕೆ ಎರಡೂ ಬುಡಕಟ್ಟು ಸಮುದಾಯದವರು ಒಪ್ಪಿಕೊಂಡಿದ್ದರು. ಆದರೆ ಮಂಗಳವಾರ ತಡರಾತ್ರಿ ಮತ್ತೆ ಘರ್ಷಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.