ಜೆರುಸಲೇಂನ ಅಲ್-ಅಕ್ಸಾ ಮಸೀದಿಗೆ ಇಸ್ರೇಲ್ ಸಚಿವರ ಭೇಟಿ: ವ್ಯಾಪಕ ಖಂಡನೆ
ಜೆರುಸಲೇಂ: ಜೆರುಸಲೇಂನ ಅಲ್-ಅಕ್ಸಾ ಮಸೀದಿಯ ಅಂಗಳಕ್ಕೆ ಇಸ್ರೇಲ್‍ನ ರಾಷ್ಟ್ರೀಯ ಭದ್ರತಾ ಸಸಿವ ಇಟಮರ್ ಬೆನ್‍ಗ್ವಿರ್ ಗುರುವಾರ ಭೇಟಿ ನೀಡಿರುವುದನ್ನು ಫೆಲಸ್ತೀನಿಯನ್ ಪ್ರಾಧಿಕಾರ ಮತ್ತು ಜೋರ್ಡಾನ್ ತೀವ್ರವಾಗಿ ಖಂಡಿಸಿದೆ.
"ನಾನು ಈ ದಿನ ಬೆಳಿಗ್ಗೆ ನಮ್ಮ ಪ್ರಾರ್ಥನಾಲಯಕ್ಕೆ ತೆರಳಿ ನಮ್ಮ ಯೋಧರಿಗೆ ಶಾಂತಿ ಮತ್ತು ನೆಮ್ಮದಿ, ನಮ್ಮ ಒತ್ತೆಯಾಳುಗಳ ತ್ವರಿತ ಬಿಡುಗಡೆ ಮತ್ತು ನಮ್ಮ ಪೂರ್ಣಪ್ರಮಾಣದ ಗೆಲುವಿಗಾಗಿ ಪ್ರಾರ್ಥಿಸಿದ್ದೇನೆ' ಎಂದು ಬೆನ್‍ಗ್ವಿರ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೇಲ್ ಸ್ವಾಧೀನಪಡಿಸಿಕೊಂಡಿರುವ ಪೂರ್ವ ಜೆರುಸಲೇಂನ ಅಲ್-ಅಕ್ಸಾ ಮಸೀದಿಯಲ್ಲಿ ಯೆಹೂದಿಗಳ ಪ್ರಾರ್ಥನೆಯನ್ನು ನಿಷೇಧಿಸಿರುವ ಇಸ್ರೇಲ್ ಸರಕಾರದ ಕ್ರಮವನ್ನು ಬೆನ್‍ಗ್ವಿರ್ ಈ ಹಿಂದಿನಿಂದಲೂ ವಿರೋಧಿಸುತ್ತಿದ್ದಾರೆ. ಜೆರುಸಲೇಂನ ಹಳೆ ನಗರದಲ್ಲಿರುವ ಮಸೀದಿಯು ಇಸ್ಲಾಮ್‍ನ ಮೂರನೇ ಪವಿತ್ರ ಸ್ಥಳವಾಗಿದೆ ಮತ್ತು ಫೆಲೆಸ್ತೀನಿಯನ್ ರಾಷ್ಟ್ರೀಯ ಅಸ್ಮಿತೆಯ ಸಂಕೇತವಾಗಿದೆ.
ಇಸ್ರೇಲ್ ನಿರ್ವಹಿಸುವ ಯಥಾಸ್ಥಿತಿಯ ಅಡಿಯಲ್ಲಿ, ಯೆಹೂದಿಗಳು ಮತ್ತು ಮುಸ್ಲಿಮರೇತರು ನಿರ್ದಿಷ್ಟ ಸಮಯದಲ್ಲಿ ಕಂಪೌಂಡ್‍ಗೆ ಭೇಟಿ ನೀಡಲು ಅನುಮತಿಸಲಾಗಿದೆ. ಆದರೆ ಅವರಲ್ಲಿ ಪ್ರಾರ್ಥನೆ ಸಲ್ಲಿಸಲು ಅಥವಾ ನಿರ್ದಿಷ್ಟ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸಲು ಅನುಮತಿಯಿಲ್ಲ. ಬೆನ್‍ಗ್ವಿವರ್ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದು ಲಕ್ಷಾಂತರ ಫೆಲೆಸ್ತೀನೀಯರಿಗೆ ಮತ್ತು ಮುಸ್ಲಿಮರಿಗೆ ಪ್ರಚೋದನೆಯಾಗಿದೆ' ಎಂದು ಫೆಲೆಸ್ತೀನ್ ಪ್ರಾಧಿಕಾರದ ವಿದೇಶಾಂಗ ಇಲಾಖೆ ಖಂಡಿಸಿದೆ.