ನಾಗರಿಕರ ಹತ್ಯೆ, ಏಕಪಕ್ಷೀಯ ಬಂಧನ | ಭಾರತದಲ್ಲಿ ಮಾನವಹಕ್ಕುಗಳ ಉಲ್ಲಂಘನೆಗೆ ಅಮೆರಿಕ ಕಳವಳ
ವಾಶಿಂಗ್ಟನ್ : ಸರಕಾರಿ ಪ್ರೇರಿತ ಹತ್ಯೆಗಳು, ನಾಗರಿಕರ ಬಲವಂತದ ಕಣ್ಮರೆ ಪ್ರಕರಣಗಳು, ಏಕಪಕ್ಷೀಯ ಬಂಧನ ಹಾಗೂ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಮೇಲೆ ಕಣ್ಗಾವಲು ನಡೆಸುವಿಕೆ ಸೇರಿದಂತೆ ಭಾರತದಲ್ಲಿ ಮಾನವಹಕ್ಕುಗಳ ಗಣನೀಯ ಉಲ್ಲಂಘನೆಯಾಗುತ್ತಿದೆ ಎಂದು ಅಮೆರಿಕ ಸರಕಾರವು ಸೋಮವಾರ ಪ್ರಕಟಿಸಿದ ವಾರ್ಷಿಕ ವರದಿಯು ಕಳವಳ ವ್ಯಕ್ತಪಡಿಸಿದೆ.
‘2023ರ ಭಾರತ ಮಾನವಹಕ್ಕುಗಳ ವರದಿ’ ಎಂಬ ಶೀರ್ಷಿಕೆಯ ಈ ವರದಿಯನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಥನಿ ಬ್ಲಿಂಕೆನ್ ಬಿಡುಗಡೆಗೊಳಿಸಿದರು. ಅಮೆರಿಕ ವಿದೇಶಾಂಗ ಇಲಾಖೆಯ ಪ್ರಜಾಪ್ರಭುತ್ವ, ಮಾನವಹಕ್ಕುಗಳು ಹಾಗೂ ಕಾರ್ಮಿಕ ಇಲಾಖೆಯು ಈ ವರದಿಯನ್ನು ಪ್ರಕಟಿಸಿತ್ತು.
ಕುಕಿ ಹಾಗೂ ಮೈತೆಯಿ ಸಮುದಾಯಗಳ ನಡುವೆ ಭುಗಿಲೆದ್ದ ಜನಾಂಗೀಯ ಸಂಘರ್ಷವು ಗಣನೀಯವಾದ ಮಾನವಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು ಎಂದು ವರದಿ ಹೇಳಿದೆ. ಮಣಿಪುರ ಜನಾಂಗೀಯ ಸಂಘರ್ಷದಲ್ಲಿ 219ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಸುಮಾರು 60 ಸಾವಿರ ಮಂದಿ ತಮ್ಮ ಮನೆಗಳಿಂದ ಪಲಾಯನಗೈದಿದ್ದಾರೆಂದು ರಾಜ್ಯ ಸರಕಾರವು ಫೆಬ್ರವರಿಯಲ್ಲಿ ಬಿಡುಗಡೆಗೊಳಿಸಿದ ಅಂಕಿಅಂಶಗಳನ್ನು ವರದಿಯು ಪ್ರಸ್ತಾವಿಸಿದೆ.
ಭಾರತದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯನ್ನು ಎಸಗಿದ ಅಧಿಕಾರಿಗಳನ್ನು ಗುರುತಿಸುವ ಅಥವಾ ದಂಡಿಸುವ ವಿಷಯದಲ್ಲಿ ಭಾರತವು ಕೈಗೊಂಡ ಕ್ರಮಗಳನ್ನು ಅತ್ಯಂತ ಕನಿಷ್ಠ ಮಟ್ಟದ್ದಾಗಿದ್ದವು ಎಂದು ವರದಿ ಹೇಳಿದೆ.
ಸರಕಾರ ಅಥವಾ ಅದರ ಏಜೆಂಟರುಗಳು ಏಕಪಕ್ಷೀಯ ಅಥವಾ ಕಾನೂನುಬಾಹಿರ ಹತ್ಯೆಗಳನ್ನು ನಡೆಸಿರುವ ಬಗ್ಗೆ ಹಲವಾರು ವರದಿಗಳು ಲಭ್ಯವಿರುವುದಾಗಿ ಅದು ಹೇಳಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಸಮಾಜವಾದಿ ಪಕ್ಷದ ಮಾಜಿ ಸಂಸದ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಅವರನ್ನು 2023ರ ಎಪ್ರಿಲ್ ನಲ್ಲಿ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ದುಷ್ಕರ್ಮಿಗಳು ಹತ್ಯೆಗೈದ ಘಟನೆಯನ್ನು ಅಮೆರಿಕದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜುಲೈನಲ್ಲಿ ಜೈಪುರದಿಂದ ಮುಂಬೈಗೆ ಆಗಮಿಸುತ್ತಿದ್ದ ರೈಲಿನಲ್ಲಿ ಕಾನ್ಸ್ಟೇಬಲ್ ಚೇತನ್ ಸಿಂಗ್ ಎಂಬಾತ ಮೂವರು ಮುಸ್ಲಿಂ ಪ್ರಯಾಣಿಕರು ಹಾಗೂ ಓರ್ವ ರೈಲ್ವೆ ರಕ್ಷಣಾ ಪಡೆ ಅಧಿಕಾರಿಯನ್ನು ಗುಂಡುಹಾರಿಸಿ ಹತ್ಯೆಗೈದ ಘಟನೆಯ ಬಗ್ಗೆಯೂ ವರದಿಯು ಗಮನಸೆಳೆದಿದೆ. ಇದೊಂದು ದ್ವೇಷಪರಾಧ ಹಾಗೂ ಭಯೋತ್ಪಾದಕ ಕೃತ್ಯವೆಂದು ಮೃತ ಪ್ರಯಾಣಿಕರ ಸಂತ್ರಸ್ತ ಕುಟುಂಬಿಕರ ಹೇಳಿಕೆಯು ಉಲ್ಲೇಖಿಸಿದೆ.
ಹಲವಾರು ಸಾಮಾಜಿಕ ಕಾರ್ಯಕರ್ತರ ಏಕಪಕ್ಷೀಯ ಬಂಧನಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಲವಾರು ಮಂದಿಯ ಬಂಧನ ಕುರಿತ ನ್ಯಾಯಾಂಗ ಪರಾಮರ್ಶೆಯನ್ನು ಮುಂದೂಡಲು ಪೊಲೀಸರು ವಿಶೇಷ ಕಾನೂನುಗಳನ್ನು ಬಳಸಲಾಗುತ್ತಿದೆ. 2015 ಹಾಗೂ 2020ರ ನಡುವೆ ಭಾರತದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆಯಡಿ 8 ಸಾವಿರಕ್ಕೂ ಅಧಿಕ ಬಂಧನಗಳು ನಡೆದಿವೆಯೆಂದು ವರದಿ ತಿಳಿಸಿದೆ.
ಅಮೆರಿಕ ವರದಿಯ ಹೈಲೈಟ್ಸ್
1.ಬಂಧನ ವಾರಂಟ್ ಗಳಿಲ್ಲದೆ ಹಲವಾರು ಮಂದಿಯನ್ನು ಕಸ್ಟಡಿ ತನಿಖೆಗಾಗಿ ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ.
2. ಸಮರ್ಪಕವಾದ ಕಾನೂನು ಪ್ರಕ್ರಿಯೆಯಿಲ್ಲದೆ ಸರಕಾರವು ಪೌರಾಡಳಿತ ಕಾನೂನುಗಳು ಅಥವಾ ನಿಯಮಗಳ ಹೆಸರಿನಲ್ಲಿ ಜನರನ್ನು ಅವರ ನಿವಾಸಗಳಿಂದ ಹೊರದಬ್ಬುತ್ತಿದೆ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುತ್ತಿದೆ ಇಲ್ಲವೇ ಬುಲ್ಡೋಝರ್ನಿಂದ ಮನೆಗಳನ್ನು, ಅಂಗಡಿಗಳನ್ನು ಕೆಡವುತ್ತಿದೆ.
3. ಪ್ರತಿಭಟನೆ ಹಾಗೂ ಕೋಮು ಹಿಂಸಾಚಾರದ ಸಂದರ್ಭದಲ್ಲಿ, ಮುಸ್ಲಿಂ ಸಮುದಾಯದಲ್ಲಿನ ಸರಕಾರದ ವಿರುದ್ಧ ಬಹಿರಂಗ ಧ್ವನಿಯೆತ್ತುವವರ ಮನೆಗಳನ್ನು ಹಾಗೂ ಅವರ ಜೀವನೋಪಾಯಗಳನ್ನು ಬುಲ್ಡೋಝರ್ಗಳ ಮೂಲಕ ನಾಶಪಡಿಸಲಾಗುತ್ತಿದೆ.
4. 2016 ಹಾಗೂ 2022ರ ನಡುವೆ ಭಾರತವು ಕಾನೂನುಬಾಹಿರ ಹತ್ಯೆಗಳ 813 ಪ್ರಕರಣಗಳು ವರದಿಯಾಗಿವೆ.
5. ಬಂಧಿತರ ವ್ಯಕ್ತಿಗಳ ಬಂಧನಕ್ಕೆ ಸಂಬಂಧಿಸಿದ ವರದಿಗಳನ್ನು ಸಲ್ಲಿಸಲು ಪೊಲೀಸರು ವಿಫಲರಾದ ಹಲವಾರು ನಿದರ್ಶನಗಳಿವೆ. ಅನೇಕ ನಾಪತ್ತೆ ಪ್ರಕರಣಗಳು ನಡೆದಿರುವುದು ಸರಕಾರದ ಪ್ರಾಧಿಕಾರಗಳ ಮೂಲಕ ವರದಿಯಾಗಿವೆ