ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ; ಮೂವರು ಸಚಿವರನ್ನು ವಜಾಗೊಳಿಸಿದ ಮಾಲ್ದೀವ್ಸ್ ಸರ್ಕಾರ
ಮಾಲೆ : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ ಮೂವರು ಸಚಿವರನ್ನು ಮಾಲ್ದೀವ್ಸ್ ಸರ್ಕಾರ ರವಿವಾರ ವಜಾಗೊಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿನ ಸಚಿವರ ಅಭಿಪ್ರಾಯಗಳು "ವೈಯಕ್ತಿಕ ಮತ್ತು ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ" ಎಂದು ಸರಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಬಳಸಿದ ಭಾಷೆಗೆ ಟೀಕೆ ಬಂದ ನಂತರ ಈ ಬೆಳವಣಿಗೆ ನಡೆದಿದೆ."ನೆರೆಯ ಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ ಸಚಿವರನ್ನು ಅಮಾನತುಗೊಳಿಸಲಾಗಿದೆ" ಎಂದು ಅಧ್ಯಕ್ಷರ ಕಚೇರಿಯನ್ನು ಉಲ್ಲೇಖಿಸಿ ಆ ದೇಶದ PSM ನ್ಯೂಸ್ ವರದಿ ಮಾಡಿದೆ.
ಮಾಲ್ದೀವ್ಸ್ ಸರ್ಕಾರವು ಸಾಮಾಜಿಕ ಮಾಧ್ಯಮದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಹಾಳುಮಾಡುವ ನಡವಳಿಕೆಯ ವ್ಯಕ್ತಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವ ತನ್ನ ಬದ್ಧತೆಯನ್ನು ದೃಢಪಡಿಸಿದೆ ಎಂದು ಅದು ಹೇಳಿದೆ. ಅಮಾನತುಗೊಂಡ ಸಚಿವರನ್ನು ಮಲ್ಶಾ ಶರೀಫ್, ಮರಿಯಮ್ ಶಿಯುನಾ ಮತ್ತು ಅಬ್ದುಲ್ಲಾ ಮಹಝೂಮ್ ಮಜೀದ್ ಎಂದು ತಿಳಿದು ಬಂದಿದೆ.
ನವೆಂಬರ್‌ನಲ್ಲಿ ಮುಹಮ್ಮದ್ ಮುಯಿಝು ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆ ಪ್ರಶ್ನೆಗಳೆದ್ದಿತ್ತು. ನೂತನ ಅಧ್ಯಕ್ಷರು ಚೀನಾ ಪರ ನಿಲುವು ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಕಳೆದ ವಾರ ಲಕ್ಷದ್ವೀಪದ ಪ್ರಾಚೀನ ಕಡಲ ತೀರದಲ್ಲಿ ಪ್ರಧಾನಿ ಮೋದಿಯವರ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ, ಮಾಲ್ದೀವ್ಸ್ ನ ಸಚಿವರು ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದಾಗ ಸಾಮಾಜಿಕ ಮಾಧ್ಯಮದಲ್ಲಿ ಗದ್ದಲ ಎದ್ದಿತ್ತು.
ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸುವಾಗ ಮಾಲ್ದೀವ್ಸ್ ಮತ್ತು ಅದರ ಅಂತರರಾಷ್ಟ್ರೀಯ ಪಾಲುದಾರರ ಕುರಿತು ದ್ವೇಷ ಮತ್ತು ನಕಾರಾತ್ಮಕತೆಯನ್ನು ಹರಡದ ರೀತಿಯಲ್ಲಿ ಬಳಸಬೇಕು ಎಂಬುದು ಮಾಲ್ದೀವ್ಸ್ ಸರಕಾರ ನಂಬಿಕೆ. ಒಂದು ವೇಳೆ ಯಾರಾದರೂ ಈ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡರೆ ಅವರ ವಿರುದ್ಧ ಕ್ರಮಕೈಗೊಳ್ಳಲು ಮಾಲ್ದೀವ್ಸ್ ಸರಕಾರ ಹಿಂಜರಿಯುವುದಿಲ್ಲ ಎಂದು ಅಲ್ಲಿನ ಸರಕಾರ ಎಚ್ಚರಿಕೆ ನೀಡಿದೆ.
ಮಾಜಿ ಅಧ್ಯಕ್ಷ ಇಬ್ರಾಹಿಂ ಉಹಮ್ಮದ್ ಸೋಲಿಹ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಲ್ದೀವ್ಸ್ ಸಚಿವರು ಭಾರತದ ವಿರುದ್ಧ "ದ್ವೇಷದ ಭಾಷೆ" ಬಳಸಿದ್ದನ್ನು ಖಂಡಿಸಿದ್ದಾರೆ. "ಮಾಲ್ಡೀವ್ಸ್ ಸರಕಾರದ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ವಿರುದ್ಧ ದ್ವೇಷಪೂರಿತ ಭಾಷೆ ಬಳಸುವುದನ್ನು ನಾನು ಖಂಡಿಸುತ್ತೇನೆ. ಭಾರತ ಯಾವಾಗಲೂ ಮಾಲ್ದೀವ್ಸ್‌ಗೆ ಉತ್ತಮ ಸ್ನೇಹಿತ. ನಮ್ಮ ಎರಡು ದೇಶಗಳ ನಡುವಿನ ಹಳೆಯ ಸ್ನೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಇಂತಹ ಕಠೋರವಾದ ಹೇಳಿಕೆಗಳನ್ನು ನಾವು ಅನುಮತಿಸಬಾರದು" ಎಂದು ಅವರು ʼ Xʼಪೋಸ್ಟ್‌ನಲ್ಲಿ ಹೇಳಿದ್ದಾರೆ.