ನೈಜೀರಿಯಾ: ಅಪಹೃತ 287 ವಿದ್ಯಾರ್ಥಿಗಳ ಬಿಡುಗಡೆ

Update: 2024-03-24 17:02 GMT

ಅಬುಜ: ವಾಯವ್ಯ ನೈಜೀರಿಯಾದಲ್ಲಿ 2 ವಾರದ ಹಿಂದೆ ಅಪಹರಿಸಲ್ಪಟ್ಟಿದ್ದ ಸುಮಾರು 300 ಶಾಲಾ ಮಕ್ಕಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾರ್ಚ್ 7ರಂದು ವಾಯವ್ಯ ನೈಜೀರಿಯಾದ ಕದುನಾ ರಾಜ್ಯದಲ್ಲಿನ ಶಾಲೆಯೊಂದರ 287 ವಿದ್ಯಾರ್ಥಿಗಳನ್ನು ಅಪಹರಿಸಿದ ತಂಡವೊಂದು ಸಮೀಪದ ಅರಣ್ಯ ಪ್ರದೇಶದಲ್ಲಿ ಅವರನ್ನು ಒತ್ತೆಸೆರೆಯಲ್ಲಿರಿಸಿ ಬಿಡುಗಡೆಗಾಗಿ ಭಾರೀ ಮೊತ್ತದ ಬೇಡಿಕೆ ಮುಂದಿರಿಸಿತ್ತು. ಅಪಹೃತರಲ್ಲಿ ಕನಿಷ್ಠ 100 ವಿದ್ಯಾರ್ಥಿಗಳು 12 ವರ್ಷದ ಕೆಳಹರೆಯದವರು ಎಂದು ಕದುನಾ ರಾಜ್ಯದ ಗವರ್ನರ್ ಉಬಾ ಸನಿ ಹೇಳಿದ್ದಾರೆ. ಶಾಲಾ ಮಕ್ಕಳ ಸುರಕ್ಷಿತ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಂಡ ನೈಜೀರಿಯಾ ಅಧ್ಯಕ್ಷ ಬೊಲ ತಿನುಬುಗೆ ಧನ್ಯವಾದ ಸಲ್ಲಿಸುವುದಾಗಿ ಅವರು ಟ್ವೀಟ್(ಎಕ್ಸ್) ಮಾಡಿದ್ದಾರೆ.

ಯಾವುದೇ ಒತ್ತೆಹಣ ಪಾವತಿಸದೆ ಮಕ್ಕಳನ್ನು ಬಿಡುಗಡೆಗೊಳಿಸುವುದಾಗಿ ಅಧ್ಯಕ್ಷ ತಿನುಬು ಘೋಷಿಸಿದ್ದರು. ಆದರೆ ನೈಜೀರಿಯಾದಲ್ಲಿ ಅಪಹರಣ ಕೃತ್ಯಗಳಲ್ಲಿ ಒತ್ತೆಹಣ ಪಾವತಿ ಸಾಮಾನ್ಯವಾಗಿದೆ ಮತ್ತು ಇದನ್ನು ಅಪಹೃತರ ಕುಟುಂಬದವರು ವ್ಯವಸ್ಥೆ ಮಾಡುತ್ತಾರೆ. ನೈಜೀರಿಯಾದ ಅಧಿಕಾರಿಗಳು ಒತ್ತೆಹಣ ಪಾವತಿಯನ್ನು ಒಪ್ಪಿಕೊಳ್ಳುವುದು ಅಪರೂಪವಾಗಿದೆ. ಶಾಲಾ ಮಕ್ಕಳ ಅಪಹರಣ ಕೃತ್ಯದ ಹೊಣೆಯನ್ನು ಯಾವುದೇ ಗುಂಪು ವಹಿಸಿಲ್ಲ. ಆದರೆ ಘರ್ಷಣೆಯಿಂದ ಜರ್ಝರಿತಗೊಂಡಿರುವ ಉತ್ತರ ಪ್ರಾಂತದಲ್ಲಿ ಅಪಹರಣ ಮತ್ತು ಸಾಮೂಹಿಕ ಹತ್ಯೆಗಳಿಗೆ ಹೆಸರಾದ ಡಕಾಯಿತ ಗುಂಪುಗಳ ಮೇಲೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಧರ್ಮಗುರು ಶೇಖ್ ಅಹ್ಮದ್ ಗುಮಿ ಹಾಗೂ ನೈಜೀರಿಯಾದ ಉಸ್ಮಾನ್ ಡ್ಯಾನ್‍ಫೋಡಿಯೊ ವಿವಿಯ ಪ್ರೊಫೆಸರ್ ಮುರ್ತಲಾ ಅಹ್ಮದ್ ರುಫಾಯಿ ಅಪಹರಣಕಾರರ ಜತೆ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಿದ್ದರು. ದಟ್ಟವಾದ ಅರಣ್ಯಪ್ರದೇಶವನ್ನು ಹೊಂದಿರುವ ನೈಜೀರಿಯಾದಲ್ಲಿ ಬಹುತೇಕ ಅಪಹರಣ ಪ್ರಕರಣಗಳಲ್ಲಿ ಯಾವುದೇ ಬಂಧನವಾಗುವುದಿಲ್ಲ. ಸಾಮಾನ್ಯವಾಗಿ ಹತಾಶ ಕುಟುಂಬಗಳು ಒತ್ತೆಹಣ ಪಾವತಿಸಿದ ಬಳಿಕ ಅಥವಾ ಸರಕಾರಿ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳ ಜತೆ ಒಪ್ಪಂದ ಮಾಡಿಕೊಂಡ ಬಳಿಕ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗುತ್ತದೆ.

2014ರಿಂದ ನೈಜೀರಿಯಾದ ಶಾಲೆಗಳಿಂದ ಕನಿಷ್ಠ 1,400 ವಿದ್ಯಾರ್ಥಿಗಳನ್ನು ಅಪಹರಿಸಲಾಗಿದೆ. 2014ರಲ್ಲಿ ನೈಜೀರಿಯಾದ ಬೊರ್ನೊ ರಾಜ್ಯದ ಚಿಬೊಕ್ ಗ್ರಾಮದ ಶಾಲೆಗೆ ನುಗ್ಗಿದ್ದ ಬೊಕೊ ಹರಾಮ್ ಸಶಸ್ತ್ರ ಹೋರಾಟಗಾರರ ಗುಂಪು 276 ವಿದ್ಯಾರ್ಥಿನಿಯರನ್ನು ಅಪಹರಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಅಪಹರಣಗಳು ದೇಶದ ವಾಯವ್ಯ ಮತ್ತು ಮಧ್ಯ ಪ್ರಾಂತಗಳಲ್ಲಿ ಕೇಂದ್ರೀಕೃತಗೊಂಡಿದ್ದು ಅಲ್ಲಿ ಹತ್ತಕ್ಕೂ ಅಧಿಕ ಸಶಸ್ತ್ರ ಗುಂಪುಗಳು ಸಾಮಾನ್ಯವಾಗಿ ಹಳ್ಳಿಗರು ಮತ್ತು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News