ನೈಜೀರಿಯಾ: ಡಕಾಯಿತರ ದಾಳಿ, ಕನಿಷ್ಟ 160 ಮಂದಿ ಸಾವು
ಅಬುಜಾ: ಮಧ್ಯ ನೈಜೀರಿಯಾದ ಗ್ರಾಮಗಳ ಮೇಲೆ ಸಶಸ್ತ್ರ ಗುಂಪು ನಡೆಸಿದ ಸಂಘಟಿಕ ದಾಳಿಯಲ್ಲಿ ಕನಿಷ್ಟ 160 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯಾಡಳಿತ ವರದಿ ಮಾಡಿದೆ.
ಶನಿವಾರ ಆರಂಭವಾದ ಡಕಾಯಿತರ ದಾಳಿ ಸೋಮವಾರ ಬೆಳಗ್ಗಿನವರೆಗೂ ಮುಂದುವರಿದಿದ್ದು ಬೊಕೋಸ್ ಪ್ರಾಂತದಲ್ಲಿ 113 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಬೊಕೋಸ್ ಪ್ರಾಂತದ 18 ಹಳ್ಳಿಗಳಲ್ಲಿನ 20 ವಿವಿಧ ಸಮುದಾಯದವರ ಪ್ರದೇಶಕ್ಕೆ ಸುವ್ಯಸ್ಥಿತ ಸಂಘಟಿತ ದಾಳಿ ನಡೆಸಿದ ಡಕಾಯಿತರು ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ' ಎಂದು ಪ್ಲಾಟೆವ್ ರಾಜ್ಯದ ಬೊಕೊಸ್ ನಗರಾಡಳಿತದ ಮುಖ್ಯಸ್ಥ ಮೋಂಡೆ ಕಸಾಹ್ ಹೇಳಿದ್ದಾರೆ.
ಬಾರ್ಕಿನ್ ಲಾಡಿ ಪ್ರಾಂತದ ಹಲವು ಹಳ್ಳಿಗಳ ಮೇಲೆಯೂ ಡಕಾಯಿತರ ದಾಳಿ ನಡೆದಿದ್ದು ಕನಿಷ್ಟ 50 ಮಂದಿ ಮೃತಪಟ್ಟಿರುವ ವರದಿಯಿದೆ. ಈ `ಸಾವಿನ ವ್ಯಾಪಾರಿ'ಗಳ ತಂತ್ರಕ್ಕೆ ನಾವು ಬಗ್ಗುವುದಿಲ್ಲ. ನ್ಯಾಯ ಮತ್ತು ಶಾಶ್ವತ ಶಾಂತಿ ಸ್ಥಾಪಿಸುವ ನಮ್ಮ ಗುರಿ ತಲುಪಲು ಸಂಘಟಿತ ಪ್ರಯತ್ನ ಮುಂದುವರಿಯಲಿದೆ ಎಂದು ಗವರ್ನರ್ ಅವರ ವಕ್ತಾರ ಗಿಯಾಂಗ್ ಬೆರೆ ಹೇಳಿದ್ದಾರೆ. ಆಮ್ನೆಸ್ಟಿ ಇಂಟರ್ನ್ಯಾಷನಲ್ ದಾಳಿಯ ಹಿನ್ನೆಲೆಯಲ್ಲಿ ಸರಕಾರವನ್ನು ಟೀಕಿಸಿದ್ದು ಅಮಾಯಕ ಜನರ ಮೇಲೆ ಪದೇ ಪದೇ ನಡೆಯುವ ದಾಳಿಯನ್ನು ತಡೆಯಲು ಆಡಳಿತ ವಿಫಲವಾಗಿದೆ ಎಂದು ಖಂಡಿಸಿದೆ.