ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ: ಮೃತರ ಸಂಖ್ಯೆ 140ಕ್ಕೆ ಏರಿಕೆ
ಜಿಗಾವಾ (ನೈಜೀರಿಯಾ): ಬುಧವಾರ ನಡೆದ ತೈಲ ಟ್ಯಾಂಕರ್ ಸ್ಫೋಟದಲ್ಲಿ ಮೃತಪಟ್ಟಿರುವ ಸಂಖ್ಯೆ 140ಕ್ಕೂ ಮೀರಿದೆ. ಈ ಸ್ಫೋಟದಲ್ಲಿ ಮಕ್ಕಳು ಸೇರಿದಂತೆ ಹಲವಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ತೈಲ ಟ್ಯಾಂಕರ್ ಒಂದು ಉರುಳಿ ಬಿದ್ದು, ಸ್ಫೋಟಗೊಂಡಿದ್ದರಿಂದ ಈ ಭೀಕರ ದುರಂತ ಸಂಭವಿಸಿದೆ.
ತೈಲ ಟ್ಯಾಂಕರ್ ಉರುಳಿ ಬಿದ್ದ ಕೂಡಲೇ ಸ್ಥಳೀಯ ನಿವಾಸಿಗಳು ತೈಲವನ್ನು ಸಂಗ್ರಹಿಸಲು ಟ್ಯಾಂಕರ್ ಬಳಿಗೆ ದೌಡಾಯಿಸಿದಾಗ, ತೈಲ ಟ್ಯಾಂಕರ್ ಸ್ಫೋಟಗೊಂಡಿದೆ. ಇದರ ಬೆನ್ನಿಗೇ ಬೆಂಕಿಯ ಜ್ವಾಲೆಗಳು ವ್ಯಾಪಿಸಿ, ಹತ್ತಾರು ಮಂದಿ ಗಂಭೀರವಾಗಿ ಗಾಯಗೊಂಡರೆ, ಹಲವರು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿದ್ದಾರೆ ಎಂದು ತುರ್ತು ಸೇವೆ ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ತೈಲ ಟ್ಯಾಂಕರ್ ಮೇಲೆ ಚಾಲಕನು ನಿಯಂತ್ರಣ ಕಳೆದುಕೊಂಡ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ತಕ್ಷಣವೇ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, ತೈಲ ಟ್ಯಾಂಕರ್ ಬಳಿ ಧಾವಿಸಿದ್ದ ಹಲವಾರು ಜನರನ್ನು ಬಲಿ ತೆಗೆದುಕೊಂಡಿದೆ.
“ಜನರು ನೆರವಿಗಾಗಿ ಮೊರೆಯಿಡುತ್ತಾ ಎಲ್ಲ ದಿಕ್ಕುಗಳಿಗೂ ಓಡುತ್ತಿದ್ದರು” ಎಂದು ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಸ್ಥಳೀಯ ನಿವಾಸಿ ಸಾನಿ ಉಮರ್ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ತೈಲ ಟ್ಯಾಂಕರ್ ಸ್ಫೋಟಗಳು ನೈಜೀರಿಯಾದಲ್ಲಿ ಸಾಮಾನ್ಯವಾಗಿದೆ. ನೈಜೀರಿಯಾದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಪ್ರಕಾರ, 2020ರಲ್ಲಿ ಇಂತಹ 1,500 ಅಪಘಾತಗಳು ಸಂಭವಿಸಿದ್ದು, ಇದರಿಂದ 535 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸಂಚಾರಿ ಹಾಗೂ ಸುರಕ್ಷತಾ ನಿಯಮಗಳ ದುರ್ಬಲ ಅನುಷ್ಠಾನದೊಂದಿಗೆ ತೈಲ ಟ್ಯಾಂಕರ್ ಗಳನ್ನು ಕಳಪೆಯಾಗಿ ನಿರ್ವಹಿಸುವುದರಿಂದ ಅಪಘಾತಗಳ ಸಂದರ್ಭದಲ್ಲಿ ತೈಲ ಸೋರಿಕೆಯಾಗುವುದು ಇಂತಹ ಘಟನೆಗಳಿಗೆ ಕಾರಣ ಎಂದು ತಜ್ಞರು ದೂಷಿಸುತ್ತಾರೆ.