ರಶ್ಯಕ್ಕಾಗಿ ಹೋರಾಡುವ ವಿದೇಶೀಯರಿಗೆ ಪೌರತ್ವ: ಪುಟಿನ್ ಘೋಷಣೆ
Update: 2024-01-05 18:07 GMT
ಮಾಸ್ಕೊ: ಉಕ್ರೇನ್ನಲ್ಲಿ ರಶ್ಯದ ಪರ ಹೋರಾಡುವ ವಿದೇಶಿ ಪ್ರಜೆಗಳು ಮತ್ತು ಅವರ ಕುಟುಂಬದವರಿಗೆ ರಶ್ಯದ ಪೌರತ್ವವನ್ನು ನೀಡುವ ಆದೇಶವನ್ನು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಜಾರಿಗೊಳಿಸಿದ್ದಾರೆ.
`ಉಕ್ರೇನಿನಲ್ಲಿ ನಡೆಯುತ್ತಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆ'ಯ ಸಂದರ್ಭ ರಶ್ಯ ಸೇನೆಯ ಪರ ಹೋರಾಡಲು ಕರಾರು ಪತ್ರಕ್ಕೆ ಸಹಿ ಹಾಕಿದವರು ತಮಗೆ ಮತ್ತು ತಮ್ಮ ಕುಟುಂಬದವರಿಗೆ ರಶ್ಯ ಪಾಸ್ಪೋರ್ಟಿಗೆ ಅರ್ಜಿ ಸಲ್ಲಿಸಬಹುದು. ಕನಿಷ್ಟ 1 ವರ್ಷದ ಕರಾರು ಪತ್ರಕ್ಕೆ ಸಹಿ ಹಾಕಿದವರಿಗೆ ಇದು ಅನ್ವಯವಾಗುತ್ತದೆ. ಸಾಮಾನ್ಯ ಸಶಸ್ತ್ರ ಪಡೆಗಳು ಅಥವಾ ಇತರ ಮಿಲಿಟರಿ ವ್ಯವಸ್ಥೆಗಳೊಂದಿಗೆ ಸಹಿ ಹಾಕಿದ ಜನರೂ ಅರ್ಹರಾಗುತ್ತಾರೆ ಎಂದು ಆದೇಶದಲ್ಲಿ ತಿಳಿಸಿದ್ದು ಇದರ ಪ್ರಕಾರ ವ್ಯಾಗ್ನರ್ ಗುಂಪಿನ ರೀತಿಯ ಬಾಡಿಗೆ ಸಿಪಾಯಿಗಳ ಗುಂಪಿಗೂ ಈ ಯೋಜನೆ ಅನ್ವಯಿಸುತ್ತದೆ. ಮಿಲಿಟರಿ ಅನುಭವ ಹೊಂದಿರುವ ವಿದೇಶಿಯರನ್ನು ರಶ್ಯ ಪರ ಹೋರಾಟಕ್ಕೆ ಆಕರ್ಷಿಸುವ ಉದ್ದೇಶದ ಯೋಜನೆ ಇದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.