`ಕ್ರಿಮಿನಲ್' ರಶ್ಯದ ವೀಟೊ ಅಧಿಕಾರ ರದ್ದುಗೊಳಿಸಿ :ವಿಶ್ವಸಂಸ್ಥೆಯಲ್ಲಿ ಝೆಲೆನ್‍ಸ್ಕಿ ಆಗ್ರಹ

Update: 2023-09-21 17:34 GMT

ಝೆಲೆನ್‍ಸ್ಕಿ | Photo: NDTV 

ವಿಶ್ವಸಂಸ್ಥೆ: ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ರಶ್ಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ, ತನ್ನ ದೇಶದ ಮೇಲೆ ರಶ್ಯ ನಡೆಸಿದ ಆಕ್ರಮಣ ಅಪರಾಧವಾಗಿರುವುದರಿಂದ ಆ ದೇಶವು ವಿಶ್ವಸಂಸ್ಥೆಯಲ್ಲಿ ಹೊಂದಿರುವ ವೀಟೊ ಅಧಿಕಾರವನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

` ಪ್ರಪಂಚದ ಹೆಚ್ಚಿನವರು ಈ ಯುದ್ಧದ ಕುರಿತ ಸತ್ಯವನ್ನು ಗುರುತಿಸಿದ್ದಾರೆ. ಇದು ಉಕ್ರೇನ್‍ನ ಪ್ರದೇಶ ಮತ್ತು ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ರಶ್ಯ ನಮ್ಮ ದೇಶದ ವಿರುದ್ಧ ನಡೆಸಿರುವ ಅಪ್ರಚೋದಿತ ಆಕ್ರಮಣವಾಗಿದೆ. ಆದ್ದರಿಂದ `ಕ್ರಿಮಿನಲ್ ರಶ್ಯ' ವಿಶ್ವಸಂಸ್ಥೆಯಲ್ಲಿ ಹೊಂದಿರುವ ವೀಟೊ ಅಧಿಕಾರವನ್ನು ರದ್ದುಗೊಳಿಸಬೇಕು. ಇದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯಲ್ಲಿ ಏಕಕಾಲದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಉತ್ತೇಜಿಸುವ ಪ್ರಮುಖ ಸುಧಾರಣಾ ಕ್ರಮವಾಗಿದೆ' ಎಂದು ಝೆಲೆನ್‍ಸ್ಕಿ ಪ್ರತಿಪಾದಿಸಿದ್ದಾರೆ.

`ಆಕ್ರಮಣಕಾರರ ಕೈಯಲ್ಲಿರುವ ವೀಟೊ ಅಧಿಕಾರ ವಿಶ್ವಸಂಸ್ಥೆಯನ್ನು ಅಸ್ತವ್ಯಸ್ತತೆಗೆ ತಳ್ಳಿದೆ. ಯುದ್ಧವನ್ನು ನಿಲ್ಲಿಸುವುದು ಅಸಾಧ್ಯ. ಯಾಕೆಂದರೆ ಎಲ್ಲಾ ಪ್ರಯತ್ನಗಳಿಗೂ ಆಕ್ರಮಣಕಾರರು ಅಥವಾ ಆಕ್ರಮಣಕಾರರನ್ನು ಕ್ಷಮಿಸುವವರು ವೀಟೊ ಪ್ರಯೋಗಿಸುತ್ತಾರೆ. ವೀಟೊ ಅಧಿಕಾರವು ಎರಡನೇ ವಿಶ್ವಯುದ್ಧದ ವಿಜಯಶಾಲಿಗಳಲ್ಲಿ ಒಬ್ಬರಾದ ಈ ಹಿಂದಿನ ಸೋವಿಯತ್ ಒಕ್ಕೂಟಕ್ಕೆ ಸೇರಿದೆ, ಪುಟಿನ್ ಅಧ್ಯಕ್ಷತೆಯ ರಶ್ಯಕ್ಕೆ ಅಲ್ಲ. ದುರದೃಷ್ಟವಶಾತ್, ಸೋವಿಯತ್ ಒಕ್ಕೂಟದ ಪತನದ ಬಳಿಕ ತೆರೆಮರೆಯ ಕೈಚಳಕದ ಮೂಲಕ ಭದ್ರತಾ ಮಂಡಳಿಯ ಈ ಸ್ಥಾನವನ್ನು ರಶ್ಯ ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದೆ. ಆಕ್ರಮಣಶೀಲತೆ ಮತ್ತು ನರಮೇಧವನ್ನು ಸಕ್ರಮಗೊಳಿಸುವುದು ಈ ಸುಳ್ಳುಗಾರರ ಕೆಲಸವಾಗಿದೆ' ಎಂದು ಝೆಲೆನ್‍ಸ್ಕಿ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ್ದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ `ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ವಿಶ್ವಸಂಸ್ಥೆಯ ಸನ್ನದು ಮತ್ತು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ವಿಭಜನೆಗಳನ್ನು ಉಲ್ಬಣಗೊಳಿಸುತ್ತಿದೆ. ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ, ಪರಮಾಣು ಬೆದರಿಕೆಯನ್ನು ಹೆಚ್ಚಿಸುವ ಜತೆಗೆ ಬಹುಧ್ರುವೀಯ ಜಗತ್ತಿನಲ್ಲಿ ಆಳವಾದ ಬಿರುಕುಗಳನ್ನು ಸೃಷ್ಟಿಸುತ್ತದೆ' ಎಂದರು.

ರಶ್ಯ ಆಕ್ಷೇಪ

ಭದ್ರತಾ ಮಂಡಳಿಯಲ್ಲಿ ಝೆಲೆನ್‍ಸ್ಕಿ ಮಾತನಾಡಲು ಮೊದಲು ಅವಕಾಶ ನೀಡಿದ ಭದ್ರತಾ ಮಂಡಳಿಯ ಹಾಲಿ ಅಧ್ಯಕ್ಷ ಅಲ್ಬೇನಿಯಾದ ಅಧ್ಯಕ್ಷರ ಕ್ರಮವನ್ನು ರಶ್ಯ ತೀವ್ರವಾಗಿ ಆಕ್ಷೇಪಿಸಿತು. `ಮಾಜಿ ಕಾಮೆಡಿಯನ್‍ಗೆ ಮೊದಲು ಮಾತನಾಡಲು ಅವಕಾಶ ನೀಡಿರುವುದು ಭದ್ರತಾ ಮಂಡಳಿಯ ಅಧಿಕಾರವನ್ನು ದುರ್ಬಲಗೊಳಿಸುವ ಮತ್ತು ಅದನ್ನು ಏಕವ್ಯಕ್ತಿ ಕಾಮೆಡಿ ಶೋ ಆಗಿ ಪರಿವರ್ತಿಸುವ ಅಪಾಯಕ್ಕೆ ಕಾರಣವಾಗಲಿದೆ' ಎಂದು ರಶ್ಯದ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ ಹೇಳಿದರು.(ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಝೆಲೆನ್‍ಸ್ಕಿ ಟಿವಿ ಶೋಗಳಲ್ಲಿ ಕಾಮೆಡಿಯನ್ ಪಾತ್ರ ನಿರ್ವಹಿಸುತ್ತಿದ್ದರು).

ಇದಕ್ಕೆ ಪ್ರತಿಕ್ರಿಯಿಸಿದ ಅಲ್ಬೇನಿಯಾ ಅಧ್ಯಕ್ಷರು `ಇದಕ್ಕೆ ಒಂದು ಪರಿಹಾರವಿದೆ. ನೀವು ಯುದ್ಧನಿಲ್ಲಿಸಿ, ಆಗ ಅಧ್ಯಕ್ಷ ಝೆಲೆನ್‍ಸ್ಕಿ ಇಲ್ಲಿಗೆ ಬರುವುದಿಲ್ಲ' ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News