ಪ್ರತಿಭಟನೆಗೆ ಕೈಜೋಡಿಸಿದ ಮೀಸಲು ಪಡೆ; ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಇಕ್ಕಟ್ಟು
ಜೆರುಸಲೇಂ: ಇಸ್ರೇಲ್ ಸರಕಾರದ ನ್ಯಾಯಾಂಗ ಸುಧಾರಣೆ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ದೇಶವ್ಯಾಪಿ ಪ್ರತಿಭಟನೆಗೆ ಸೇನೆಯ ಮೀಸಲು ಪಡೆ ಕೈಜೋಡಿಸಿರುವುದು ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ತೀವ್ರ ಮುಜುಗುರ ತಂದಿದ್ದು ಮೀಸಲು ಪಡೆಯ ಮನ ಒಲಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಸಾವಿರಾರು ಮೀಸಲು ಯೋಧರು ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ. ಆರಂಭದಲ್ಲಿ ಮೀಸಲು ಯೋಧರ ವಿರುದ್ಧ ತುರ್ತು ಕ್ರಮದ ಎಚ್ಚರಿಕೆ ನೀಡಿದ್ದ ನೆತನ್ಯಾಹು ತಮ್ಮ ಧೋರಣೆ ಬದಲಿಸಿದ್ದು ಮೀಸಲು ಪಡೆಯ ಯೋಧರು ರಚಿಸಿರುವ `ಬ್ರದರ್ಸ್ ಇನ್ ಆಮ್ರ್ಸ್' ಎಂಬ ಪ್ರತಿಭಟನಾ ಗುಂಪಿನ ಜತೆ ಸ್ನೇಹಹಸ್ತ ಚಾಚಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ ಮೀಸಲು ಯೋಧರಲ್ಲಿ ನೂರಾರು ವಾಯುಪಡೆಯ ಪೈಲಟ್ಗಳೂ ಸೇರಿದ್ದು ಇವರು ಸಾಪ್ತಾಹಿಕ `ರಿಫ್ರೆಶ್' ಕಾರ್ಯಕ್ರಮ ತಪ್ಪಿಸಿಕೊಂಡರೆ ಮುಂದಿನ ತಿಂಗಳ ಹೊತ್ತಿಗೆ ಯುದ್ಧಕ್ಷೇತ್ರಕ್ಕೆ ಅರ್ಹತೆ ಪಡೆಯುವುದಿಲ್ಲ. ಇರಾನ್, ಲೆಬನಾನ್, ಫೆಲೆಸ್ತೀನೀಯರೊಂದಿಗೆ ಇಸ್ರೇಲ್ನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವುದರಿಂದ ತಮ್ಮ ದೇಶದ ಮಿಲಿಟರಿ ಸಾಮಥ್ರ್ಯಕ್ಕೆ ಘಾಸಿ ಎಸಗುವ ಕ್ರಮಗಳಿಂದ ದೂರ ಇರುವಂತೆ ನೆತನ್ಯಾಹು ಈ ಹಿಂದೆ ಮೀಸಲು ಪಡೆಗೆ ಎಚ್ಚರಿಕೆ ನೀಡಿದ್ದರು. ಆದರೆ ತಮ್ಮ ನಿರ್ಧಾರವು ಇಸ್ರೇಲ್ನ ಪ್ರಜಾಪ್ರಭುತ್ವ ರಕ್ಷಿಸುವಲ್ಲಿ ಕೊನೆಯ ಮಾರ್ಗವಾಗಿದೆ ಎಂದು ಮೀಸಲು ಪಡೆಯ ಯೋಧರು ಸ್ಪಷ್ಟವಾಗಿ ಹೇಳಿದ ಬಳಿಕ ರವಿವಾರ ಮೀಸಲು ಪಡೆಯ ಉನ್ನತ ಮುಖಂಡರೊಂದಿಗೆ ನೆತನ್ಯಾಹು ಸಭೆ ನಡೆಸಿದ್ದು ಮೃದು ಧೋರಣೆ ತಳೆಯುವ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಆದರೆ ಸರಕಾರ ತನ್ನ ನಿರ್ಧಾರ ವಾಪಾಸು ಪಡೆಯುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು `ಬ್ರದರ್ಸ್ ಇನ್ ಆಮ್ರ್ಸ್' ಹೇಳಿದೆ.
ಇದುವರೆಗೆ ರಾಜಕೀಯ ವಿದ್ಯಮಾನದ ಬಗ್ಗೆ ಆಸಕ್ತಿ ತೋರದ ಇಸ್ರೇಲ್ನ ಸಶಸ್ತ್ರ ಪಡೆಯ ಒಂದು ವಿಭಾಗ ಈಗ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಕೈಜೋಡಿಸಿರುವುದು ಮುಂದಿನ ದಿನಗಳಲ್ಲಿ ಸರಕಾರದ ಇನ್ನಷ್ಟು ಶಾಖೆಗಳಿಗೆ ಪ್ರೇರಣೆ ನೀಡಬಹುದು ಎಂದು ವಿಶ್ಲೇಷಿಸಲಾಗಿದೆ. ನ್ಯಾಯಾಂಗ ಸುಧಾರಣೆ ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳನ್ನು ಇಸ್ರೇಲ್ ಸುಪ್ರೀಂಕೋರ್ಟ್ ಸೆಪ್ಟಂಬರ್ 12ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ.
ಮೀಸಲು ಯೋಧರ ಪ್ರತಿಭಟನೆಯಿಂದ ಇದುವರೆಗೆ ಸೀಮಿತ ಪರಿಣಾಮ ಬೀರಿದೆ ಎಂದು ಇಸ್ರೇಲ್ ಸೇನೆ ಹೇಳಿಕೆ ನೀಡಿದೆ. ಆದರೆ ಸಿರಿಯಾ ಅಥವಾ ಇತರೆಡೆ ಇಸ್ರೇಲ್ ವಾಯುಪಡೆ ನಡೆಸುವ ವೈಮಾನಿಕ ಕಾರ್ಯಾಚರಣೆಯಲ್ಲಿ ವಾಯುಪಡೆಯ ಮೀಸಲು ಯೋಧರೇ ಹೆಚ್ಚಾಗಿ ಪಾಲ್ಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಚರಣೆಗಳ ಮೇಲೆ ಪ್ರತಿಭಟನೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಇಸ್ರೇಲ್ನ ಮಿಲಿಟರಿ ಬೇಹುಗಾರಿಕೆ ವಿಭಾಗದ ನಿವೃತ್ತ ಜನರಲ್ ಅಮೋಸ್ ಗಿಲಾಡ್ ಹೇಳಿದ್ದಾರೆ.