ವಜ್ರಗಳ ಆಮದಿನ ಮೇಲಿನ ನಿರ್ಬಂಧ ತಿರುಗುಬಾಣ ಆದೀತು ; ರಶ್ಯ ಎಚ್ಚರಿಕೆ
ಮಾಸ್ಕೊ: ರಶ್ಯದಿಂದ ವಜ್ರಗಳನ್ನು ಆಮದು ಮಾಡಿಕೊಳ್ಳುವುದನ್ನು ಯುರೋಪಿಯನ್ ಯೂನಿಯನ್ ನಿಷೇಧಿಸಿದರೆ ಆ ದೇಶಗಳಿಗೇ ಅದು ತಿರುಗುಬಾಣ ಆದೀತು ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸೋಮವಾರ ಹೇಳಿದ್ದಾರೆ.
ಉಕ್ರೇನ್ ವಿರುದ್ಧದ ಸಂಘರ್ಷದ ಹಿನ್ನೆಲೆಯಲ್ಲಿ ರಶ್ಯ ವಿರುದ್ಧ ಇನ್ನಷ್ಟು ಹೊಸ ನಿರ್ಬಂಧ ಜಾರಿಗೊಳಿಸಲು ಇತ್ತೀಚೆಗೆ ಯುರೋಪಿಯನ್ ಯೂನಿಯನ್ ನಿರ್ಧರಿಸಿತ್ತು. ಕಚ್ಛಾ ವಜ್ರಗಳನ್ನು ಉತ್ಪಾದಿಸುವ ವಿಶ್ವದ ಅತೀ ದೊಡ್ಡ ದೇಶವಾಗಿರುವ ರಶ್ಯದಿಂದ ವಜ್ರಗಳನ್ನು ನೇರವಾಗಿ ಆಮದು ಮಾಡಿಕೊಳ್ಳುವುದರ ಮೇಲೆ ಜನವರಿ 1ರಿಂದ ಮತ್ತು ಮೂರನೇ ದೇಶಗಳಲ್ಲಿ ಸಂಸ್ಕರಿಸಲಾಗುವ ರಶ್ಯದ ವಜ್ರಗಳ ಆಮದಿನ ಮೇಲೆ ಮಾರ್ಚ್ 1ರಿಂದ ನಿಷೇಧ ಹೇರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಯುರೋಪಿಯನ್ ಯೂನಿಯನ್ ಕಳೆದ ವಾರ ಹೇಳಿಕೆ ನೀಡಿತ್ತು.
ಇಂತಹ ಕ್ರಮಗಳನ್ನು ನಾವು ಈ ಹಿಂದಿನಿಂದಲೂ ನಿರೀಕ್ಷಿಸಿದ್ದೆವು. ಇದುವರೆಗಿನ ನಿರ್ಬಂಧಗಳ ಪರಿಣಾಮವನ್ನು ಕಡಿಮೆಗೊಳಿಸುವ ಮಾರ್ಗಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಹೊಸ ಪ್ರಸ್ತಾವನೆ ಯುರೋಪಿಯನ್ ಯೂನಿಯನ್‍ನ ಹಿತಾಸಕ್ತಿಗೇ ಋಣಾತ್ಮಕ ಪರಿಣಾಮ ಬೀರಬಹುದು. ಬೂಮರಾಂಗ್‍ನಂತೆ ಈ ಕ್ರಮವೂ ಅವರಿಗೇ ತಿರುಗು ಬಾಣವಾಗಲಿದೆ ಎಂದು ಪೆಸ್ಕೋವ್ ಎಚ್ಚರಿಕೆ ನೀಡಿದ್ದಾರೆ.