ಉಕ್ರೇನ್ ಐತಿಹಾಸಿಕ ನಗರದ ಮೇಲೆ ರಶ್ಯ ದಾಳಿ: 7 ಮಂದಿ ಮೃತ್ಯು
ಕೀವ್: ಉಕ್ರೇನ್ ನ ಐತಿಹಾಸಿಕ ನಗರವಾದ ಚೆರ್ನಿಹಿವ್ನ ಕೇಂದ್ರ ವೃತ್ತದ ಮೇಲೆ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ 6 ವರ್ಷದ ಮಗುವಿನ ಸಹಿತ 7 ಮಂದಿ ಮೃತಪಟ್ಟಿದ್ದು 90 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ನ ಆಂತರಿಕ ಸಚಿವಾಲಯ ಶನಿವಾರ ಹೇಳಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ಥಳೀಯರು ಚರ್ಚ್ಗೆ ತೆರಳುತ್ತಿದ್ದ ಸಂದರ್ಭ ಕ್ಷಿಪಣಿ ದಾಳಿ ನಡೆದಿದೆ. ಗಾಯಗೊಂಡವರಲ್ಲಿ 12 ಮಕ್ಕಳು ಹಾಗೂ 10 ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. `ನಗರದ ಕೇಂದ್ರ ವೃತ್ತವನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಪಾಲಿಟೆಕ್ನಿಕ್ ಯುನಿವರ್ಸಿಟಿ, ರಂಗಭೂಮಿ ಸಭಾಂಗಣಕ್ಕೆ ಹಾನಿಯಾಗಿದೆ. ಸಾಮಾನ್ಯ ಶನಿವಾರವನ್ನು ರಶ್ಯವು ಹಾನಿ ಮತ್ತು ನೋವಿನ ದಿನವನ್ನಾಗಿಸಿದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ. ರಂಗಭೂಮಿಯ ಎದುರುಗಡೆ ಪಾರ್ಕ್ ಮಾಡಲಾಗಿದ್ದ ಕಾರುಗಳು ಹಾನಿಗೊಂಡಿರುವುದು ಹಾಗೂ ರಂಗಭೂಮಿಯ ಛಾವಣಿಗೆ ಹಾನಿಯಾಗಿರುವ ವೀಡಿಯೊವನ್ನು ಉಕ್ರೇನ್ ಅಧ್ಯಕ್ಷರ ಕಚೇರಿ ಪೋಸ್ಟ್ ಮಾಡಿದೆ.