ರಶ್ಯ: ವಿಧ್ವಂಸಕ ಕೃತ್ಯದ ಶಂಕೆ, ಬೆಲಾರುಸ್ ಪ್ರಜೆಯ ಬಂಧನ
Update: 2024-02-13 17:00 GMT
ಮಾಸ್ಕೋ: ಪಶ್ಚಿಮ ರಶ್ಯದ ರೈಲ್ವೇ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದ ಬೆಲಾರುಸ್ ಪ್ರಜೆಯನ್ನು ಉಕ್ರೇನ್ ಪರ ವಿಧ್ವಂಸಕ ಕೃತ್ಯ ಎಸಗುತ್ತಿದ್ದ ಶಂಕೆಯಲ್ಲಿ ಬಂಧಿಸಿರುವುದಾಗಿ ಸರಕಾರಿ ಸ್ವಾಮ್ಯದ ಆರ್‍ಐಎ ಸುದ್ಧಿಸಂಸ್ಥೆ ವರದಿ ಮಾಡಿದೆ.
2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಶ್ಯ ಪೂರ್ಣಪ್ರಮಾಣದ ಆಕ್ರಮಣ ಎಸಗಿದ ಬಳಿಕ ರಶ್ಯದ ವಿಶಾಲವಾದ ರೈಲು ಜಾಲದಲ್ಲಿ ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ ಶಂಕೆಯಲ್ಲಿ ಹಲವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ 25 ವರ್ಷದ ಯುವಕನಾಗಿದ್ದು, ಉಕ್ರೇನ್ ಅಧಿಕಾರಿಯಿಂದ ಹಣ ಪಡೆದು ಮಾಸ್ಕೋದ ಬಳಿಯ ಟುಲಾ ಮೆಟ್ರೋ ನಿಲ್ದಾಣದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ. ರಶ್ಯದ ವೊರೊನೆಜ್ ನಗರದಲ್ಲಿ ಮತ್ತೊಂದು ದುಷ್ಕøತ್ಯಕ್ಕೆ ಹೊಂಚು ಹಾಕುತ್ತಿದ್ದಾಗ ರಶ್ಯದ ಬೇಹುಗಾರಿಕಾ ಪಡೆ ಬಂಧಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.